ಬೆಳಗಾವಿ:ನಗರದಲ್ಲಿ ಚಿನ್ನಾಭರಣ ಮಳಿಗೆ ಮಾಲೀಕ ಕೋವಿಡ್‍ನಿಂದ ಬಲಿಯಾಗಿದ್ದರು. ಈ ಸಮಯವನ್ನು ದುರುಪಯೋಗ ಮಾಡಿಕೊಂಡಿರುವ ಮೃತನ ಸಹೋದರ ಮಳಿಗೆಯಲ್ಲಿದ್ದ 4 ಕೋಟಿ ರೂ ಮೌಲ್ಯದ ಚಿನ್ನ ಸಮೇತ ಪರಾರಿ ಆಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಮಳಿಗೆಯಲ್ಲಿ ಆಭರಣ ಮಾಡಿಸಲು ಗಟ್ಟಿ ಬಂಗಾರ ನೀಡಿದ್ದ ಗ್ರಾಹಕರೀಗ ತಮ್ಮ ಚಿನ್ನ ಪಡೆಯಲು ಪೊಲೀಸ್ ಠಾಣೆ ಮೆಟ್ಟಿಲೇರುವ ಅನಿವಾರ್ಯತೆ ಎದುರಾಗಿದೆ.
ಡಿಸಿಪಿ ವಿಕ್ರಂ ಆಮ್ಟೆ ಮಾಹಿತಿ ಬೆಳಗಾವಿಯ ಖಡೇಬಜಾರ್ ರಸ್ತೆಯಲ್ಲಿ ಅನಿಲ್ ಮುತಕೇಕರ್ ಹಾಗೂ ಅರವಿಂದ ಮುತಕೇಕರ್ ಸಹೋದರರು ಮುತಕೇಕರ್ ಜ್ಯುವೆಲ್ಲರ್ಸ್, ಎಸ್.ವಿ ಮುತಕೇಕರ್ ಅಂಡ್ ಕಂಪನಿ ಎಂಬ ಹೆಸರಿನಲ್ಲಿ ಪ್ರತ್ಯೇಕ ಮಳಿಗೆ ಹೊಂದಿದ್ದಾರೆ. ಎರಡು ಮಳಿಗೆಯಲ್ಲೂ ಸಹೋದರರು ಪಾಲುದಾರಿಕೆ ಹೊಂದಿದ್ದರು.
ಕಳೆದ ಜೂನ್ ತಿಂಗಳಲ್ಲಿ ಅನಿಲ್ ಮುತಕೇಕರ್ ಕೋವಿಡ್‍ನಿಂದ ಮೃತಪಟ್ಟಿದ್ದರು. ಸಹೋದರನ ನಿಧನದ ಬಳಿಕ ಮಳಿಗೆ ಮುನ್ನಡೆಸಿಕೊಂಡು ಹೋಗುವ ಜೊತೆಗೆ ಗಟ್ಟಿ ಬಂಗಾರ ನೀಡಿದ್ದ ಗ್ರಾಹಕರಿಗೆ ಆಭರಣ ಮರಳಿಸಬೇಕಿತ್ತು. ಆದರೆ, ಮೃತನ ತಮ್ಮ ಅರವಿಂದ ಮುತಕೇಕರ್ ಮಳಿಗೆಯಲ್ಲಿದ್ದ 4 ಕೋಟಿ ರೂ ಮೌಲ್ಯದ ಚಿನ್ನದ ಸಮೇತ ಎಸ್ಕೇಪ್ ಆಗಿದ್ದಾನೆ. ಇದೀಗ ಗಟ್ಟಿ ಬಂಗಾರ ನೀಡಿದ್ದ ಗ್ರಾಹಕರು ಪೊಲೀಸರ ಮೊರೆ ಹೋಗಿದ್ದಾರೆ.
ಚಿಕ್ಕಪ್ಪನ ವಿರುದ್ಧ ದೂರು ನೀಡಿದ ಮೃತನ ಪುತ್ರಿ
ತಂದೆಯ ನಿಧನದ ನೋವಿನಲ್ಲಿರುವ ಅನಿಲ್ ಕುಟುಂಬಕ್ಕೆ ಚಿಕ್ಕಪ್ಪ ಅರವಿಂದ ಮುತಕೇಕರ್ ಎಸಗಿರುವ ಮಹಾಮೋಸ ಅರಗಿಸಿಕೊಳ್ಳಲು ಆಗುತ್ತಿಲ್ಲ. ಮಳಿಗೆಯಲ್ಲಿದ್ದ 4 ಕೋಟಿ ಮೌಲ್ಯದ ಚಿನ್ನಾಭರಣ ಜೊತೆಗೆ ಎಸ್ಕೇಪ್ ಆಗಿರುವ ಅರವಿಂದ ಸಾಲದೆಂಬಂತೆ ಅಣ್ಣನ ಪುತ್ರಿಯ ಮೊಬೈಲ್ ನಂಬರ್ ಮಳಿಗೆಗೆ ಅಂಟಿಸಿದ್ದಾನೆ. ಅರವಿಂದ ವಿರುದ್ಧ ಅನಿಲ್ ಪುತ್ರಿ ಖಡೇಬಜಾರ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಅಲ್ಲದೆ, ಆಭರಣ ಮಾಡಿಸಲು ಗಟ್ಟಿ ಬಂಗಾರ ನೀಡಿದ್ದ ಗ್ರಾಹಕರೂ ಕೂಡ ಖಡೇಬಜಾರ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದಾರೆ. ಆದರೆ, ಕೋಟ್ಯಂತರ ಮೌಲ್ಯದ ಚಿನ್ನದ ಜೊತೆಗೆ ಕಾಲ್ಕಿತ್ತಿರುವ ಅರವಿಂದ ಮಾತ್ರ ಹೊರ ರಾಜ್ಯದಲ್ಲಿ ತಂಗಿದ್ದು, ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾನೆ ಎಂದು ತಿಳಿದು ಬಂದಿದೆ. ಆತನಿಗಾಗಿ ಖಡೇಬಜಾರ್ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.
ಸಾಕ್ಷ್ಯ ನೀಡಿದ ಸಿಸಿ ಕ್ಯಾಮೆರಾ ದೃಶ್ಯ
ಅಣ್ಣ ಸಾವನ್ನಪ್ಪಿ ಒಂದು ತಿಂಗಳ ಒಳಗಾಗಿ ಚಿನ್ನಾಭರಣ ಮಳಿಗೆಗೆ ಸಂಬಂಧಿಕರ ಜೊತೆಗೆ ಆಗಮಿಸಿರುವ ಮೃತನ ತಮ್ಮ ಅರವಿಂದ ಮಳಿಗೆಯಲ್ಲಿದ್ದ ಚಿನ್ನ ಹಾಗೂ ಹಣ ಲೂಟಿ ಮಾಡಿದ್ದ. ಸಂಬಂಧಿಕರ ಜೊತೆಗೆ ಮಳಿಗೆಯೊಳಗೆ ನುಗ್ಗುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ:ಕರ್ನಾಟಕದಲ್ಲಿ ಅತಿ ಹೆಚ್ಚು ಸೈಬರ್ ಪ್ರಕರಣ ದಾಖಲು: NCRB ವರದಿ