ಬೆಳಗಾವಿ: ಗೋಕಾಕ ತಾಲೂಕಿನ ಮೆಳವಂಕಿ ಗ್ರಾಮದ ತೋಟದಲ್ಲಿ ಅನುಮಾನಸ್ಪದ ಶವ ಪತ್ತೆ ಪ್ರಕರಣವನ್ನು ಭೇದಿಸಿರುವ ಗೋಕಾಕ ನಗರ ಪೊಲೀಸರು ಮೆಳವಂಕಿ ಗ್ರಾಮದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಮೆಳವಂಕಿ ಗ್ರಾಮದ ಪತ್ನಿ ಯಲ್ಲವ್ವ ಸನದಿ (30) ಮತ್ತು ಆಕೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವೀರೂಪಾಕ್ಷಿ ಮಠಪತಿ (21) ಬಂಧಿತ ಆರೋಪಿಗಳಾಗಿದ್ದಾರೆ. ಕೊಲೆಯಾದವ ಅಪ್ಪಣ್ಣ ಸನದಿ (40). ಪ್ರಕರಣದಲ್ಲಿ ಪತ್ನಿಯೇ ತನ್ನ ಪ್ರಿಯಕರ ಜೊತೆಗೂಡಿ ಪತಿ ಅಪ್ಪಣ್ಣನನ್ನು ಬಿಲಕುಂದಿ ಗ್ರಾಮದ ವ್ಯಾಪ್ತಿಯಲ್ಲಿ ಕೊಲೆಗೈದು, ಘಟಪ್ರಭಾ ನದಿಯಲ್ಲಿ ಶವವನ್ನು ಮಾ.24ರಂದು ಎತ್ತಿಹಾಕಿ ನದಿಯಲ್ಲಿ ಈಜಲು ತೆರಳಿದಾಗ ಅಸ್ವಾಭಾವಿಕ ಸಾವು ಎಂಬಂತೆ ಬಿಂಬಿಸಲು ಪ್ರಯತ್ನಿಸಿದರು. ಆದ್ರೆ ತನಿಖೆಯಲ್ಲಿ ಇಬ್ಬರು ಆರೋಪಿಗಳು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಹಿನ್ನೆಲೆ:ಕೊಲೆಯಾದ ವ್ಯಕ್ತಿ ತನ್ನ ಪತ್ನಿ ಬೇರೊಬ್ಬನೊಂದಿಗೆ ಅನೈತಿಕ ಸಂಬಂಧ ಹೊಂದಿರುವುದನ್ನು ಆಕ್ಷೇಪಿಸಿದ್ದನು ಎನ್ನಲಾಗಿದೆ. ತನ್ನ ಅನೈತಿಕ ಚಟುವಟಿಕೆಗಳಿಗೆ ಪತಿ ಪದೇ-ಪದೇ ಅಡ್ಡಿ ಪಡಿಸುತ್ತಿದ್ದನ್ನು ಸಹಿಸದ ಪತ್ನಿ ಆತನ ಕೊಲೆಗೆ ಸಂಚು ರೂಪಿಸುತ್ತಿದ್ದಳು ಎನ್ನಲಾಗಿದೆ.
ಇದೇ ಸಮಯದಲ್ಲಿ ಕಳೆದ ಮಾ.24ರಂದು ಅಪ್ಪಣ್ಣ ತನ್ನ ಪತ್ನಿಯ ಸಹೋದರಿಯ ಊರಿಗೆ ತೆರಳುವ ವೇಳೆ ಆಕೆಯ ಪ್ರಿಯಕರ ಹಣದ ವ್ಯವಹಾರ ಮುಗಿಸು ನೆಪವೊಡ್ಡಿ ಬಿಲಕುಂದಿ ಗ್ರಾಮದಲ್ಲಿನ ಹೊಲವೊಂದರಲ್ಲಿ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.