ಬೆಳಗಾವಿ:ಗೋಕಾಕನ್ನು ಒಂದೇ ಕುಟುಂಬಕ್ಕೆ ಜಾಗಿರು ಕೊಡಲಾಗಿದೆ, ಇಲ್ಲಿ ಸ್ವಾತಂತ್ರ್ಯವನ್ನು ಕಟ್ಟಿ ಹಾಕಿ ಸರ್ವಾಧಿಕಾರತ್ವ ನಡೆಸಲಾಗುತ್ತಿದೆ ಎಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಅಶೋಕ ಪೂಜಾರಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು. ಗೋಕಾಕ ನಗರದಲ್ಲಿ ಒಂದೇ ಕುಟುಂಬದ ಸರ್ವಾಧಿಕಾರತ್ವ ತಲೆದೋರಿದಂತಾಗಿದೆ. ಸಾರ್ವಜನಿಕರ ಹೋರಾಟದ ಸ್ವಾತಂತ್ರವನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ. ಗೋಕಾಕ ಫಾಲ್ಸ್ಗೆ ಹೊಂದಿಕೊಂಡಿರುವ ದನದ ಓಣಿಯಲ್ಲಿರುವ ಮನೆಗಳಿಗೆ ವಿದ್ಯುತ್ ಸೌಲಭ್ಯ ನೀಡಬೇಕೆಂದು ಆಗ್ರಹಿಸಿ ಸೋಮವಾರ ನಡೆಸಿದ ಹೋರಾಟವನ್ನು ಮಾಜಿ ಶಾಸಕ ರಮೇಶ ಜಾರಕಿಹೊಳಿ ಬೆಂಬಲಿಗರು ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ.
ಪ್ರತಿಭಟನೆ ಮಾಡಲು ಪೋಲಿಸ್ ಇಲಾಖೆಯಿಂದ ಮೊದಲೇ ಅನುಮತಿಯನ್ನು ಪಡೆಯಲಾಗಿತ್ತು, ಆದರೆ ನಮ್ಮ ಅನುಮತಿ ಇಲ್ಲದೆ ಹೇಗೆ ಪ್ರತಿಭಟನೆ ಮಾಡುತ್ತಿರಿ ಎಂದು ಸರ್ವಾಧಿಕಾರದ ಮನೋಭಾವನೆಯನ್ನು ಜಾರಕಿಹೊಳಿ ಬೆಂಬಲಿಗರು ತೋರುತ್ತಿರುವುದನ್ನು ನೋಡಿದರೆ, ಗೋಕಾಕ ಸ್ವತಂತ್ರ ಭಾರತದಿಂದ ದೂರ ಉಳಿದಿದೆಯೇ ಎನ್ನುವ ಅನುಮಾನ ಮೂಡುವಂತಿದೆ ಎಂದು ಆರೋಪಿಸಿದ್ದಾರೆ.
ನಾವು ಪಾದಯಾತ್ರೆ ಮಾಡುವ ಸಮಯದಲ್ಲಿ ಕೆಲವು ಕಾರ್ಮಿಕರನ್ನು ಕರೆಸಿ ರಮೇಶ ಜಾರಕಿಹೊಳಿ ಜಿಂದಾಬಾದ್, ಅಂಬಿರಾವ್ ಪಾಟೀಲ ಜಿಂದಾಬಾದ್, ಅಶೋಕ ಪೂಜಾರಿ ಗೋಬ್ಯಾಕ್ ಎನ್ನುವ ಘೋಷಣೆ ಕೂಗಿಸುವ ಹುನ್ನಾರ ನಡೆಸಿರುವುದು ದುರ್ದೈವದ ಸಂಗತಿ ಒಂದು ವೇಳೆ ಪೋಲಿಸರು ಆ ಸಂದರ್ಭದಲ್ಲಿ ಇಲ್ಲದಿದ್ದರೆ ಪಾದಯಾತ್ರಿಗಳಿಗೆ ಅಪಾಯವಾಗುವ ಸಾಧ್ಯತೆಗಳಿದ್ದವು ಇದೆಲ್ಲವನ್ನು ನೋಡಿದರೆ ಗೋಕಾಕನ್ನು ಅಧಿಕಾರಿಗಳು ಆಳದೆ, ಅನರ್ಹ ಶಾಸಕರು ಆಳುತ್ತಿರುವುದು ಎದ್ದು ಕಾಣುತ್ತಿದೆ. ಇದೆಲ್ಲವು ಇಲ್ಲಿಗೆ ಕೊನೆಗೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದಿದ್ದಾರೆ.