ಬೆಳಗಾವಿ: ಏನಾದರೂ ಆಗಲಿ ಬದುಕಿ ತೋರಿಸಬೇಕು ಎಂದುಕೊಂಡರೆ ಏನಾದರೂ ಸಾಧನೆ ಮಾಡಬಹುದು. ಮಹಿಳೆಯರು ಅಡುಗೆ ಮನೆಗೆ ಸೀಮಿತ ಎಂಬ ಮಾತನ್ನ ಸುಳ್ಳು ಮಾಡಿದ ರೈತ ಮಹಿಳೆಯೊಬ್ಬರು ಮೇಕೆ ಸಾಕಾಣಿಕೆಯಲ್ಲಿ ವರ್ಷಕ್ಕೆ ಹತ್ತು ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುತ್ತಿದ್ದಾರೆ.
ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ವೀಣಾ ನಿರ್ವಾಣಿ ಎಂಬುವರು ಮೇಕೆ ಸಾಕಾಣಿಕೆಯಲ್ಲಿ ಲಕ್ಷಾಂತರ ಆದಾಯ ಗಳಿಕೆ ಮಾಡುತ್ತಿರುವ ರೈತ ಮಹಿಳೆ. ಬಿಎ ಪದವಿ ಶಿಕ್ಷಣ ಪಡೆದುಕೊಂಡಿರುವ ವೀಣಾ, ಐದಾರು ವರ್ಷಗಳ ಕಾಲ ಬೇರೆ ಬೇರೆ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿದ್ರು. ಆದ್ರೆ, ದುಡಿಮೆಗೆ ತಕ್ಕದಾದ ಪ್ರತಿಫಲ ಸಿಗದಿದ್ದಾಗ ತಮ್ಮದೇ ಜಮೀನಿನಲ್ಲಿ ಕೃಷಿ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಈಗ ಇತರರಿಗೆ ಮಾದರಿಯಾಗಿದ್ದಾರೆ.
ಐದೇ ಮೇಕೆ ಮರಿಗಳಿಂದ ಕಾಯಕ ಶುರು :ಇವರು ಆರಂಭದಲ್ಲಿ ಹೈನುಗಾರಿಕೆ ಉದ್ಯಮ ಪ್ರಾರಂಭಿಸುತ್ತಾರೆ. ಬೇಸಿಗೆ ಕಾಲದಲ್ಲಿ ಹಸುಗಳಿಗೆ ನೀರಿನ ಅಭಾವ ಕಾಡುತ್ತದೆ. ಹೀಗಾಗಿ, ಕಡಿಮೆ ನೀರಿನಲ್ಲಿ ಏನನ್ನಾದರೂ ಸಾಧನೆ ಮಾಡಲೇಬೇಕೆಂದು ಪಣತೊಟ್ಟ ವೀಣಾ, ಮೊದಲಿಗೆ ಸಣ್ಣ ಪ್ರಮಾಣದಲ್ಲಿ ಐದು ಮೇಕೆಗಳನ್ನು ಖರೀದಿಸಿ ಸಾಕುತ್ತಾರೆ.
ಕೇವಲ ಐದೇ ಮೇಕೆ ಮರಿಗಳಿಂದ ಆರಂಭವಾದ ಈಕೆಯ ಕನಸು ನೂರಾರು ಮೇಕೆಗಳಿಗೆ ಏರಿಕೆ ಕಂಡಿದೆ. ಜೊತೆಗೆ ಸಾಕಷ್ಟು ಲಾಭ ಗಳಿಸುತ್ತಾರೆ. ಅಂದು ಕೇವಲ 50 ಸಾವಿರ ರೂ.ಗಳ ಬಂಡವಾಳ ಹಾಕಿ 1ಜಮುನಾಪಾರಿ ಗಂಡು ಮೇಕೆ ಐದು ಹೆಣ್ಣು ಮೇಕೆಗಳನ್ನು ಸಾಕಾಣಿಕೆ ಮಾಡಿದ್ದರು.
ಐಟಿ ಸ್ಯಾಲರಿ ಮೀರಿಸುವಂತಿದೆ ಈಕೆಯ ಸಂಪಾದನೆ ಪರಿಣಾಮ, ಪ್ರಸ್ತುತವಾಗಿ 96ಕ್ಕೂ ಹೆಚ್ಚು ಮೇಕೆಗಳಿವೆ. ವರ್ಷದ ಎಲ್ಲ ಖರ್ಚು-ವೆಚ್ಚಗಳನ್ನು ತೆಗೆದು ವರ್ಷಕ್ಕೆ 10 ಲಕ್ಷ ಆದಾಯ ಗಳಿಸುವ ಮೂಲಕ ಜಿಲ್ಲೆಯ ಮಹಿಳೆಯರಿಗೆ ಆದರ್ಶರಾಗಿದ್ದಾರೆ. ನಮ್ಮ ಭಾಗದ ಮೇಕೆ ಸಾಕುವುದರಿಂದ ತೂಕ ಮತ್ತು ಮಾಂಸದ ಇಳುವರಿ ಕಡಿಮೆ. ಹಾಗಾಗಿ, ಉತ್ತರ ಭಾರತದ ವಿವಿಧ ತಳಿಯ ಆಡುಗಳನ್ನು ಸಾಕುವುದರಿಂದ ಮಾಂಸದ ಇಳುವರಿಯಲ್ಲಿ ಹೆಚ್ಚಿಗೆ ಆಗುತ್ತದೆ ಅಂತಾರೆ ವೀಣಾ.
ಉತ್ತಮ ಕೃಷಿ ಮಹಿಳೆ ಪ್ರಶಸ್ತಿ :ಅಚ್ಚುಕಟ್ಟಾದ ಮೇಕೆ ಸಾಕಾಣಿಕೆ ಮಾಡಿಕೊಂಡು ಇತರರಿಗೆ ಮಾದರಿಯಾದ ವೀಣಾ ನಿರ್ವಾಣಿ ಅವರಿಗೆ ಕಳೆದ 2017ರಲ್ಲಿ ಧಾರವಾಡ ಕೃಷಿವಿಶ್ವವಿದ್ಯಾಲಯ ಉತ್ತಮ ಕೃಷಿ ಮಹಿಳೆ ಪ್ರಶಸ್ತಿ ನೀಡಿ ಗೌರವಿಸಿದೆ.
ಕೆಲಸವಿಲ್ಲವೆಂದು ಮನೆಯಲ್ಲಿ ಕೈಕಟ್ಟಿ ಕುಳಿತುಕೊಳ್ಳುವ ಬದಲು ಕೃಷಿಯಲ್ಲಿ ಲಾಭದಾಯಕವಾದ ಆಡು, ಕೋಳಿ ಇನ್ನಿತರ ಸ್ವಂತ ಉದ್ಯೋಗ ಮಾಡುವ ಧೈರ್ಯ, ಛಲವಿರಬೇಕು. ಶ್ರದ್ಧೆಯಿಂದ ಮಾಡಿದ ಕೆಲಸ ಖಂಡಿತ ಕೈಹಿಡಿಯುತ್ತದೆ. ಹೀಗಾಗಿ, ಮಹಿಳೆಯರು ಸ್ವಂತ ಉದ್ಯೋಗ ಮಾಡುವ ಸಂಕಲ್ಪ ಮಾಡಬೇಕು ಅಂತಾರೆ ಈ ಸಾಧಕಿ.