ಬೆಳಗಾವಿ: ಎಲ್ಲೆಡೆ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮನೆ ಮನೆಗೆ ತೆರಳಿ ರ‍್ಯಾಪಿಡ್ ಆಂಟಿಜೆನ್ ಟೆಸ್ಟ್ ಮಾಡುವ ಮೂಲಕ ಸೋಂಕಿತರನ್ನು ಕೂಡಲೇ ಪತ್ತೆ ಮಾಡಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಉನ್ನತ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರ‍್ಯಾಟ್(ರ‍್ಯಾಪಿಡ್ ಆಂಟಿಜನ್ ಟೆಸ್ಟ್ ) ಕಿಟ್ ಈಗ ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಸೋಂಕು ಪತ್ತೆ ಮಾಡಬೇಕು. ಶೇ.30 ರಷ್ಟು ರ‍್ಯಾಟ್ ಮಾಡಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆದಾಗ್ಯೂ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ರ‍್ಯಾಟ್ ಪ್ರಮಾಣ ಕಡಿಮೆಯಿದೆ ಎಂದು ಹೇಳಿದರು.
ಸರಿಯಾದ ವಿಳಾಸ - ದೂರವಾಣಿ ಸಂಖ್ಯೆ ಸಂಗ್ರಹಿಸಲು ಸೂಚನೆ:
ಮಾದರಿ ಸಂಗ್ರಹಿಸುವ ಸಂದರ್ಭದಲ್ಲಿ ಸರಿಯಾದ ವಿಳಾಸವನ್ನು ಪಡೆದುಕೊಳ್ಳಬೇಕು. ತಪ್ಪು ವಿಳಾಸ ನೀಡುತ್ತಿರುವುದರಿಂದ ಕೋವಿಡ್ ತಪಾಸಣೆ ಉದ್ದೇಶ ಈಡೇರುತ್ತಿಲ್ಲ ಎಂದು ರವಿಕುಮಾರ್ ಅಭಿಪ್ರಾಯಪಟ್ಟರು. ತಪ್ಪು ವಿಳಾಸದಿಂದ ಸೋಂಕಿತರ ಚಿಕಿತ್ಸೆ ಹಾಗೂ ಐಸೋಲೇಷನ್ ಎರಡೂ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಪರ್ಯಾಯ ದೂರವಾಣಿ ಸಂಖ್ಯೆ ಪಡೆಯಲು ನಿರ್ದೇಶನ ನೀಡಿದರು.
ಹೋಮ್ ಐಸೋಲೇಷನ್ನಲ್ಲಿ ಇರುವವರ ಮೇಲೆ ವಾರ್ ರೂಮ್ ಮೂಲಕ ನಿರಂತರ ನಿಗಾ ವಹಿಸಬೇಕು. ಸೋಂಕು ದೃಢಪಟ್ಟ ತಕ್ಷಣವೇ ಅಗತ್ಯ ಔಷಧ ಕಿಟ್ ನೀಡಬೇಕು ಎಂದು ನಿರ್ದೇಶನ ನೀಡಿದರು.