ಚಿಕ್ಕೋಡಿ(ಬೆಳಗಾವಿ): ಭಾರತೀಯರು ಗೋವುಗಳಲ್ಲಿ ದೇವರನ್ನು ಕಾಣುತ್ತಾರೆ. ಗೋವುಗಳು ಚಲಿಸುವ ದೇವಾಲಯ ಎಂದು ಗೋವುಗಳನ್ನು ಪೂಜಿಸುತ್ತಾರೆ. ಆದರೆ, ಕೆಲವರು ಗೋವುಗಳನ್ನು ಆಹಾರವಾಗಿ ಸೇವಿಸುತ್ತಾರೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಅನೇಕ ದೇಶಿ ಗೋ ತಳಿಗಳು ವಿನಾಶದ ಅಂಚಿಗೆ ತಲುಪುತ್ತಿದ್ದು, ಅಂತಹ ತಳಿಗಳನ್ನು ಸಂರಕ್ಷಿಸುವ ಉದ್ದೇಶದಿಂದ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರದಲ್ಲಿ 'ಗೋ ಕೈಲಾಸ' ಸ್ಥಾಪಿಸಲಾಗಿದ್ದು, ವಿವಿಧ ದೇಶಿ ತಳಿಯ ಗೋವುಗಳನ್ನು ಪಾಲನೆ ಮಾಡಲಾಗುತ್ತಿದೆ.
ಯಡೂರಿನಲ್ಲಿದೆ ದೇಶಿ ತಳಿಯ ಗೋವುಗಳ ಗೋಶಾಲೆ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಯಡೂರ ಗ್ರಾಮ, ವಿರೂಪಾಕ್ಷ ಲಿಂಗ ದೇವರು ನೆಲೆಸಿದ ಪವಿತ್ರ ಕ್ಷೇತ್ರ. ಇಲ್ಲಿ ಭಾರತೀಯ ಗೋ ಸಂತತಿಯ ಸಂರಕ್ಷಣೆ ಮತ್ತು ಸಾಮಾಜಿಕ ಬದಲಾವಣೆಗೆ ಪೂರಕವಾಗಿ ಶ್ರೀ ಕ್ಷೇತ್ರದ ಧರ್ಮಾಧ್ಯಕ್ಷ ಶ್ರೀಶೈಲ ಪೀಠದ ಜಗದ್ಗುರು ಡಾ.ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಗೋ ಕೈಲಾಸ ಎಂಬ ವಿಶಿಷ್ಟ ಪರಿಕಲ್ಪನೆಯೊಂದಿಗೆ ಪಾರಂಪರಿಕ ಪಂಚವರ್ಣದ ದೇಶಿ ಗೋ ತಳಿಗಳ ಸಂರಕ್ಷಣೆಗೆ ಮುಂದಾಗಿದ್ದಾರೆ.
ಗೋಶಾಲೆಯಲ್ಲಿ ಗಿರ್, ವೊಂಗಲ್, ಜವಾರಿ, ಖಿಲಾರಿ, ಸೈವಾಲ್, ರಾಟಿ ಸೇರಿದಂತೆ ವಿವಿಧ ದೇಶಿ ತಳಿಯ 50ಕ್ಕೂ ಹೆಚ್ಚು ಹಸುಗಳನ್ನು ಸದ್ಯಕ್ಕೆ ಪೋಷಣೆ ಮಾಡಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಅವುಗಳ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ. ಒಂದು ಗೋವಿನ ಪೂಜೆಯಿಂದ 33 ಕೋಟಿ ದೇವತೆಗಳನ್ನು ಪೂಜಿಸಿದ ಫಲ ದೊರಕುತ್ತದೆ ಎಂಬ ನಂಬಿಕೆ ಭಾರತೀಯ ಸಂಸ್ಕೃತಿಯಲ್ಲಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಹಾಲಿನ ಉತ್ಪನ್ನಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ವಿದೇಶಿ ತಳಿಯ ಹಸುಗಳನ್ನು ಸಾಕಣೆ ಮಾಡಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ದೇಶಿ ಗೋ ತಳಿಗಳ ಮಹತ್ವ ತಿಳಿಸಲು ಗೋ ಕೈಲಾಸ ಆರಂಭಿಸಲಾಗಿದೆ.
ಇದನ್ನೂ ಓದಿ:ಕಣಬರಗಿ ಯೋಧನ ಮಗನ ಮೇಲೆ ಹಲ್ಲೆ ಆರೋಪ: ಸ್ಪಷ್ಟನೆ ನೀಡಿದ ಬಿಜೆಪಿ ಮುಖಂಡ
ಈ ಗೋ ಕೈಲಾಸದಲ್ಲಿ ಹಸುಗಳನ್ನು ಕಟ್ಟುವುದಿಲ್ಲ ಕೊಟ್ಟಿಗೆಯಲ್ಲಿ ಕೂಡಿ ಹಾಕುವುದಿಲ್ಲ. ಅವು ಸ್ವಚ್ಛಂದವಾಗಿ ಓಡಾಡಿಕೊಂಡಿರುವಂತೆ ವ್ಯವಸ್ಥೆ ಮಾಡಲಾಗಿದೆ. ಗೋ ಕೈಲಾಸದ ಮಧ್ಯದಲ್ಲಿ ಪಂಚಮುಖಿ ಪರಮೇಶ್ವರ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಐದು ಸುತ್ತುಗಳಲ್ಲಿ ಐದು ಗೋವುಗಳನ್ನು ಪೂಜಿಸಿ, ಅಂತಿಮವಾಗಿ ಪಂಚಮುಖಿ ಪರಮೇಶ್ವರನ ಪೂಜೆಗೆ ಸಾರ್ವಜನಿಕರಿಗೆ ಅವಕಾಶವಿದೆ. ವಿರುಪಾಕ್ಷಲಿಂಗ ಮತ್ತು ಕಾಡಸಿದ್ದೇಶ್ವರ ಮಠದ ದರ್ಶನಕ್ಕಾಗಿ ಬರುವ ಭಕ್ತಾದಿಗಳಿಗೆ ಗೋ ಕೈಲಾಸ ವಿಶೇಷ ಆಕರ್ಷಣೆಯಾಗಿದೆ.