ಬೆಳಗಾವಿ :ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲಿಂಗಾಯತ ಪಂಚಮಸಾಲಿ ಸಮಾಜ ಸಂಪೂರ್ಣ ಬೆಂಬಲ ನೀಡಿದ್ದು. ನಮ್ಮ ಸಮಾಜಕ್ಕೆ ಒಂದು ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಮಾಜಿ ಸಚಿವ ಶಶಿಕಾಂತ ನಾಯಿಕ ಕಾಂಗ್ರೆಸ್ ನಾಯಕರಿಗೆ ಒತ್ತಾಯಿಸಿದರು. ಇಂದು ನಗರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದರು.
2023ರ ಚುನಾವಣೆಯಲ್ಲಿ ಕರ್ನಾಟಕ ಜನ ಬದಲಾವಣೆ ಬಯಸಿದ ಹಿನ್ನೆಲೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಹುಮತದಿಂದ ಸರ್ಕಾರ ರಚಿಸುತ್ತಿದೆ. ಇದರಿಂದ ನಮಗೂ ಬಹಳಷ್ಟು ಖುಷಿಯಾಗಿದೆ. ಬಿಜೆಪಿಯಲ್ಲಿ ಬಹಳ ಮನಸ್ಸಿಗೆ ನೋವಾಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿದ್ದು, ಜೊತೆಗೆ ಅನೇಕ ನಾಯಕರು ಪಕ್ಷ ಬಿಟ್ಟಿದ್ದರಿಂದ ಬದಲಾವಣೆ ಆಗಿದೆ. ಇದರ ಪರಿಣಾಮ ಕಾಂಗ್ರೆಸ್ನಿಂದ 39 ಲಿಂಗಾಯತ ಶಾಸಕರು ಆರಿಸಿ ಬಂದಿದ್ದಾರೆ. ಇದರಲ್ಲಿ 12 ಪಂಚಮಸಾಲಿ ಘಟಾನುಘಟಿ ನಾಯಕರು ಆರಿಸಿ ಬಂದಿದ್ದಾರೆ ಎಂದು ಶಶಿಕಾಂತ ನಾಯಿಕ ಹೇಳಿದರು.
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿಯವರಿಗೆ ನಮ್ಮ ಒತ್ತಾಯವಿದೆ. 12 ಪಂಚಮಸಾಲಿ ಶಾಸಕರಲ್ಲಿ ಕೆಲವರಿಗೆ ಮಂತ್ರಿ ಸ್ಥಾನ ನೀಡಬೇಕು. ಬೇರೆ ಸಮಾಜದವರು ಮುಖ್ಯಮಂತ್ರಿ ಸ್ಥಾನ ಕೇಳುತ್ತಿರುವ ವಿಚಾರವಾಗಿ ಎಂ.ಬಿ. ಪಾಟೀಲ ಸೇರಿ ಅನೇಕರು ಸಿಎಂ ರೇಸ್ನಲ್ಲಿದ್ದಾರೆ. ಹೀಗಾಗಿ ಅವರಿಗೂ ಕೂಡ ಸ್ಥಾನಮಾನ ಕೊಡಬೇಕು. ವಿಜಯಾನಂದ ಕಾಶಪ್ಪನವರ, ಲಕ್ಷ್ಮೀ ಹೆಬ್ಬಾಳ್ಕರ್, ವಿನಯ ಕುಲಕರ್ಣಿ, ಸಿದ್ದು ಸವದಿ ಸೇರಿ ಅನೇಕ ಮುಖಂಡರು ನಮ್ಮಲ್ಲಿ ಮುಂಚೂಣಿಯಲ್ಲಿದ್ದಾರೆ.
ಸಮಾಜಕ್ಕೆ ಗೌರವ ಕೊಡುವ ನಿಟ್ಟಿನಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಒಂದು ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು. ಉಪಮುಖ್ಯಮಂತ್ರಿ ಸ್ಥಾನ ನೀಡುವುದರಿಂದ ಕಾಂಗ್ರೆಸ್ ಪಕ್ಷ ಮತ್ತು ಸಮಾಜಕ್ಕೆ ಒಳ್ಳೆಯ ಸಂದೇಶ ಹೋಗುತ್ತದೆ. ಈ ಮೂಲಕ ಕಾಂಗ್ರೆಸ್ ನಾಯಕರಿಗೆ ವಿನಮ್ರವಾಗಿ ಒತ್ತಾಯಿಸುತ್ತಿದ್ದೇವೆ ಎಂದು ಶಶಿಕಾಂತ ನಾಯಿಕ ಎಂದರು.