ಬೆಳಗಾವಿ :ಜಿಲ್ಲೆಯ ಗೋಕಾಕ್ ತಾಲೂಕಿನ ಹುದಲಿ ಗ್ರಾಮದ ಹೊರವಲಯದಲ್ಲಿರುವ ಬೃಹತ್ ಕಾಲುವೆವೊಂದರಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಬಾಲಕಿಯೊಬ್ಬಳು ತನ್ನ ಸಹಪಾಠಿಗಳೊಂದಿಗೆ ಸೇರಿ ಕಾಪಾಡಿದ ಘಟನೆ ನಿನ್ನೆ ಸಂಜೆ ನಡೆದಿದೆ. ಗೋಕಾಕ್ ತಾಲೂಕಿನ ಹುದಲಿ ಗ್ರಾಮದ ಬಸಪ್ಪ ಎಂಬುವರು ನಿನ್ನೆ ಸಂಜೆ ವಾಯುವಿಹಾರಕ್ಕೆಂದು ಕೆನಾಲ್ನ ದಂಡೆಯ ಮೇಲೆ ಹೋಗುತ್ತಿದ್ದರು.
ಈ ವೇಳೆ ಆಯತಪ್ಪಿ ಕೆನಾಲ್ನಲ್ಲಿ ಬಿದ್ದಿದ್ದಾರೆ. ಇತ್ತ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಬಿದ್ದಿದ್ದ ಬಸಪ್ಪ ಕೊಚ್ಚಿಕೊಂಡು ಹೋಗುತ್ತಿದ್ದರು. ಈ ವೇಳೆ ಕೆನಾಲ್ ಮೆಟ್ಟಿಲುಗಳ ಮೇಲೆ ಬಟ್ಟೆ ತೊಳೆಯಲು ಬಂದಿದ್ದ ಅದೇ ಗ್ರಾಮದ ಹೈಸ್ಕೂಲ್ ಓದುತ್ತಿರುವ ಶಶಿಕಲಾ ಪಾಟೀಲ ವೇಲ್ ಎಸೆದು ತನ್ನ ಸಹಪಾಠಿಗಳ ಸಹಾಯದಿಂದ ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಕಾಪಾಡಿದ್ದಾರೆ. ಇತ್ತ ಶಶಿಕಲಾ ಮತ್ತು ಆಕೆಯ ಸಹಪಾಠಿಗಳ ಸಮಯ ಪ್ರಜ್ಞೆಯಿಂದ ಕಾಲುವೆಗೆ ಜಾರಿ ಸಾವಿನ ಅಂಚಿನಲ್ಲಿದ್ದ ವ್ಯಕ್ತಿಯ ಪ್ರಾಣ ಉಳಿದಿದೆ.