ಬೆಳಗಾವಿ:ಇಲ್ಲಿನ ಕೆಎಸ್ಸಿಎ ಮೈದಾನದಲ್ಲಿ ಶನಿವಾರ ಭಾರತ ಎ ಹಾಗೂ ಶ್ರೀಲಂಕಾ ಎ ನಡುವಿನ ಎರಡನೇ ಅನಧಿಕೃತ ಏಕದಿನ ಪಂದ್ಯದಲ್ಲಿ ಭಾರತ ಹತ್ತು ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ.
ಟಾಸ್ ಗೆದ್ದ ಭಾರತ ಎ ತಂಡ ಶ್ರೀಲಂಕಾವನ್ನು ಮೊದಲು ಬ್ಯಾಟಿಂಗ್ಗೆ ಇಳಿಸಿತು. ಲಂಕನ್ನರ ಪರ ಶೆಹಾನ್ ಜಯಸೂರ್ಯ ಆಕರ್ಷಕ 101 ಹಾಗೂ ಇಶಾನ್ ಜಯರತ್ನೆ 79 ರನ್ ಬಾರಿಸಿದರು. ಶ್ರೀಲಂಕಾ ನಿಗದಿತ 50 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 242 ಗಳಿಸಿತು.
ಭಾರತ ಎ ತಂಡದ ಪರವಾಗಿ ಶಿವಮ್ ದುಬೆ ಹಾಗೂ ತುಷಾರ್ ದೇಶಪಾಂಡೆ ತಲಾ 2 ವಿಕೆಟ್ ಪಡೆದರೆ, ಶ್ರೇಯಸ್ ಗೋಪಾಲ್, ದೀಪಕ್ ಹೂಡಾ ಹಾಗೂ ಇಶಾನ್ ಪೊರೆಲ್ ಒಂದೊಂದು ವಿಕೆಟ್ ಹಂಚಿಕೊಂಡರು.
ಬಳಿಕ 243 ರನ್ಗಳ ಗುರಿ ಬೆನ್ನತ್ತಿದ ಭಾರತ ಎ ತಂಡಕ್ಕೆ ಆರಂಭಿಕರು ಆಸರೆಯಾದರು. ಮೊದಲ ಪಂದ್ಯದ ಹೀರೋ ಋತುರಾಜ್ ಗಾಯಕ್ವಾಡ್ 94 ಎಸೆತದಲ್ಲಿ ಆಕರ್ಷಕ 125 ರನ್ ಸಿಡಿಸಿದರೆ, ಶುಭ್ಮನ್ ಗಿಲ್ 96 ಎಸೆತದಲ್ಲಿ 109 ಬಾರಿಸಿದರು. ಇಬ್ಬರ ಅಬ್ಬರ ಬ್ಯಾಟಿಂಗ್ ಫಲವಾಗಿ ಭಾರತ ತಂಡ 33.3 ಎಸೆತದಲ್ಲಿ ಗುರಿ ಮುಟ್ಟಿ ಸಂಭ್ರಮಿಸಿತು.
ಈ ಗೆಲುವಿನೊಂದಿಗೆ ಭಾರತ ಎ ತಂಡ ಐದು ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಮುನ್ನಡೆ ಸಾಧಿಸಿದೆ.