ಬೆಳಗಾವಿ:ಗೋಕಾಕ ತಾಲೂಕು ಘಟಪ್ರಭಾ ಪಟ್ಟಣದ ಮೃತ್ಯುಂಜಯ ವೃತ್ತದಲ್ಲಿ ರಾಜ್ಯಸಭೆ ಸಂಸದ ಈರಣ್ಣಾ ಕಡಾಡಿ ಕಾರಿಗೆ ಸತೀಶ ಜಾರಕಿಹೊಳಿ ಬೆಂಬಲಿಗರಿಂದ ಘೇರಾವ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಬೆಳಗಾವಿಯಲ್ಲಿ ಬಿಜೆಪಿ ಉಪಾಧ್ಯಕ್ಷ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಣದಿಂದ ಗೌಪ್ಯ ಸಭೆ ನಡೆದಿದೆ.
ಸತೀಶ್ ಬೆಂಬಲಿಗರ ಮುತ್ತಿಗೆ ಬಗ್ಗೆ ಚರ್ಚೆ:ನಗರದ ಪ್ರವಾಸಿ ಮಂದಿರದಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಸಭೆ ಹಮ್ಮಿಕೊಂಡಿದ್ದು, ಪ್ರಮುಖವಾಗಿ ಗೋಕಾಕ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ನಿನ್ನೆ ರಾಜ್ಯಸಭೆಯ ಸದಸ್ಯ ಈರಣ್ಣಾ ಕಡಾಡಿ ಅವರ ಕಾರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಅವರ ಬೆಂಬಲಿಗರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದನ್ನು ಇಲ್ಲಿ ಚರ್ಚಿಸಲಾಗಿದೆ ಎನ್ನಲಾಗುತ್ತಿದೆ.
ಇತ್ತ ಈ ಪ್ರಕರಣ ಗಂಭೀರವಾಗಿ ಪರಿಗಣಿಸಿರುವ ಬೆಳಗಾವಿ ಜಿಲ್ಲಾ ಬಿಜೆಪಿ ನಾಯಕರು, ಗೌಪ್ಯ ಸಭೆ ಆಯೋಜಿಸಿರುವುದು ಜಿಲ್ಲೆಯಲ್ಲಿ ಮಾತ್ರ ತೀವ್ರ ಕುತೂಹಲ ಕೆರಳಿಸಿದೆ.
ಜಾರಕಿಹೊಳಿ ಬ್ರದರ್ಸ್ ಹೊರಗಿಟ್ಟು ಸಭೆ:ಸಭೆಯಲ್ಲಿ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ, ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಮಾಜಿ ಶಾಸಕ ಸಂಜಯ್ ಪಾಟೀಲ್, ಡಾ. ವಿಶ್ವನಾಥ ಪಾಟೀಲ, ಅರವಿಂದ ಪಾಟೀಲ, ಮಹಾಂತೇಶ ಕವಟಗಿಮಠ, ಯಮಕನಮರಡಿ ಬಿಜೆಪಿ ಪರಾಜಿತ ಅಭ್ಯರ್ಥಿ, ನಿಗಮ ಮಂಡಳಿ ಅಧ್ಯಕ್ಷ ಮಾರುತಿ ಅಷ್ಟಗಿ ಭಾಗಿಯಾಗಿದ್ದರು.
ಈ ಸಭೆ ಬಿಜೆಪಿಯ ಜಾರಕಿಹೊಳಿ ಬ್ರದರ್ಸ್ ಮತ್ತವರ ಬೆಂಬಲಿತರನ್ನು ಹೊರಗಿಟ್ಟು ಸಭೆ ನಡೆಸಲಾಗುತ್ತಿದೆ. ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಿರುದ್ಧ ಮುಂದಿನ ಹೋರಾಟ ಹೇಗಿರಬೇಕು ಎಂಬೆಲ್ಲ ಚರ್ಚೆಗಳು ನಡೆಯುವ ಸಾಧ್ಯತೆ ಇದೆ.
ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ :ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ ನಾಯಕರ ಭಿನ್ನಮತ ಮತ್ತೆ ಮುಂದುವರೆದಿದ್ದು ಬಿಜೆಪಿ ಉಪಾಧ್ಯಕ್ಷ ಲಕ್ಷ್ಮಣ ಸವದಿ ಬಣದಲ್ಲಿ ಗುರುತಿಸಲ್ಪಡುವ ಕೆಲ ಬಿಜೆಪಿ ಶಾಸಕರು ಹಾಗೂ ಮುಖಂಡರ ಸಭೆ ನಡೆಸಿದ್ದು ಇದಕ್ಕೆ ಪುಷ್ಟಿ ನೀಡುತ್ತಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹಾಗೂ ಅವರ ಬೆಂಬಲಿಗರು ಸಭೆಯಲ್ಲಿ ಬಾಗಿಯಾಗಿಲ್ಲ.
ಹೀಗಾಗಿ ಬೆಳಗಾವಿ ಬಿಜೆಪಿ ನಾಯಕರು ಭಿನ್ನಮತ ಮುಂದಿನ ಚುನಾವಣೆಯಲ್ಲಿ ಸಾಕಷ್ಟು ಪರಿಣಾಮ ಉಂಟು ಮಾಡಲಿದೆ ಎಂಬ ಲೆಕ್ಕಾಚಾರ ಬಿಜೆಪಿ ಕಾರ್ಯಕರ್ತರಲ್ಲಿದೆ.
ಇದನ್ನೂಓದಿ:ಸಿದ್ದರಾಮಯ್ಯ ಕೋಲಾರದ ಕ್ಷೇತ್ರದಲ್ಲಿ ಸ್ಫರ್ಧೆ: ಒಮ್ಮತ ಸೂಚಿಸಿದ ಜಿಲ್ಲೆಯ ಕೈ ಮುಖಂಡರು