ಗೋಕಾಕ್(ಬೆಳಗಾವಿ): ಘಟಪ್ರಭಾ ನದಿ ಪ್ರವಾಹಕ್ಕೆ ನಲುಗಿದ ಹಡಗಿನಹಾಳ ಗ್ರಾಮದ ಕುಟುಂಬವೊಂದು ರಸ್ತೆ ಬದಿ ಟ್ರ್ಯಾಕ್ಟರ್ ಟ್ರೈಲರ್‌ನಲ್ಲಿ ವಾಸಿಸುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿ ಬಂದೊದಗಿದ್ದರೂ ಸಹ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಇವರ ಸಮಸ್ಯೆಗೆ ಸ್ಪಂದಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.
ಪ್ರವಾಹ ತಂದ ಸಂಕಷ್ಟ: ಟ್ರ್ಯಾಕ್ಟರ್ ಟ್ರೈಲರ್‌ನಲ್ಲಿ ಜೀವನ ಸಾಗಿಸುತ್ತಿರುವ ಕುಟುಂಬ! - ಬೆಳಗಾವಿ
ಘಟಪ್ರಭಾ ನದಿ ಪ್ರವಾಹಕ್ಕೆ ತುತ್ತಾದ ಕುಟುಂಬವೊಂದು ಕಳೆದ ಐದು ದಿನಗಳಿಂದ ಟ್ರ್ಯಾಕ್ಟರ್ ಟ್ರೈಲರ್‌ನಲ್ಲಿ ವಾಸಿಸುತ್ತಿದೆ. ಆದರೆ ಇವರ ಸಂಕಷ್ಟಕ್ಕೆ ಇನ್ನೂ ಅಧಿಕಾರಿಗಳು ಸ್ಪಂದಿಸಿಲ್ಲವೆಂದು ತಿಳಿದುಬಂದಿದೆ.
ಗೋಕಾಕ್ ತಾಲೂಕಿನ ಹಡಗಿನಾಳ ಗ್ರಾಮದ ಲಕ್ಷ್ಮಣ ತಳವಾರ ಎಂಬುವರ ಕುಟುಂಬ ಪ್ರವಾಹಕ್ಕೆ ತತ್ತರಿಸಿದೆ. ಈ ಕುಟಂಬಸ್ಥರು ಆಶ್ರಯಕ್ಕಾಗಿ ಬೇರೊಬ್ಬರ ಟ್ರ್ಯಾಕ್ಟರ್ ಟ್ರೈಲರ್ ಬಾಡಿಗೆ ತೆಗೆದುಕೊಂಡು ಕಳೆದ ಐದಾರು ದಿನಗಳಿಂದ ಅದರಲ್ಲೇ ವಾಸಿಸುತ್ತಿದ್ದಾರೆ. ಅಗತ್ಯ ವಸ್ತುಗಳನ್ನು ಟ್ರೈಲರ್ನಲ್ಲಿಟ್ಟುಕೊಂಡು, ಕೆಳಗಿರುವ ಕಲ್ಲು ಹಾಸಿಗೆ ಮೇಲೆ ಪುಟ್ಟ ಮಕ್ಕಳೊಂದಿಗೆ ಜೀವನ ಜೀವನ ಸಾಗಿಸುತ್ತಿದ್ದಾರೆ. ಆದರೆ ಇವರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಸಂಭವಿಸಿದ್ದ ಭೀಕರ ಪ್ರವಾಹಕ್ಕೆ ಮನೆ ಕಳೆದುಕೊಂಡ ಈ ಕುಟುಂಬಕ್ಕೆ ಈವರೆಗೂ ಸರಿಯಾಗಿ ಪರಿಹಾರಧನ ಬಂದಿಲ್ಲ. ಹೀಗಾಗಿ ಮನೆಯ ಕಾಮಗಾರಿ ಪೂರ್ಣಗೊಂಡಿಲ್ಲ. ನೆರೆಯಿಂದ ಬದುಕು ಕಳೆದುಕೊಂಡಿರುವ ಈ ನಿರಾಶ್ರಿತ ಕುಟುಂಬದ ನೆರವಿಗೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಧಾವಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.