ಕರ್ನಾಟಕ

karnataka

ETV Bharat / state

ಮನೆಗಳ ಸರ್ವೇಗೆ ಬೆಳಗಾವಿಯ ದಂಡುಮಂಡಳಿ ನಿರ್ಣಯ: ನಿವಾಸಿಗಳಲ್ಲಿ ಹೆಚ್ಚಿದ ಆತಂಕ - General Meeting of the dandu mandali

ದಂಡುಮಂಡಳಿ ವ್ಯಾಪ್ತಿಗೆ ಒಳಪಟ್ಟಿರುವ ನೂರಾರು ಮನೆಗಳನ್ನು ಗುತ್ತಿಗೆ ಆಧಾರದ ಮೇಲೆ ನೀಡಲಾಗಿದ್ದು, ಅವುಗಳ ಸರ್ವೇ ಕಾರ್ಯಕ್ಕೆ ಸಂಬಂಧಿಸಿದಂತೆ ಸಮಿತಿಯೊಂದನ್ನು ರಚಿಸಲು ನಿರ್ಧರಿಸಲಾಗಿದೆ.

General Meeting of the dandu mandali
ದಂಡುಮಂಡಳಿ ಸಾಮಾನ್ಯ ಸಭೆ

By

Published : Nov 23, 2020, 3:49 PM IST

ಬೆಳಗಾವಿ:ಬೆಳಗಾವಿಯ ದಂಡುಮಂಡಳಿ ವ್ಯಾಪ್ತಿಗೆ ಒಳಪಡುವ 180ಕ್ಕೂ ಅಧಿಕ ಮನೆಗಳ ಸರ್ವೇ ಮಾಡಲು ಸಮಿತಿ ರಚಿಸುವ ಸಂಬಂಧ ಎಂಎಲ್‍ಐಆರ್​​​ಸಿ ಬ್ರಿಗೇಡಿಯರ್ ರೋಹಿತ್ ಚೌಧರಿ ನೇತೃತ್ವದಲ್ಲಿ ಇಂದು ನಡೆದ ದಂಡುಮಂಡಳಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ದಂಡುಮಂಡಳಿ ವ್ಯಾಪ್ತಿಗೆ ಒಳಪಟ್ಟಿರುವ ನೂರಾರು ಮನೆಗಳನ್ನು ಗುತ್ತಿಗೆ ಆಧಾರದ ಮೇಲೆ ನೀಡಲಾಗಿದೆ. ಡಾ.ಪ್ರಭಾಕರ ಕೋರೆ, ಕಾಂಗ್ರೆಸ್ ಮುಖಂಡ ಶಿವಕಾಂತ ಸಿದ್ನಾಳ ಸೇರಿದಂತೆ ರಾಜಕೀಯ ನಾಯಕರು ಐಷಾರಾಮಿ ಮನೆಗಳನ್ನು ಗುತ್ತಿಗೆ ಆಧಾರದ ಮೇಲೆ ಪಡೆದು ವಾಸವಾಗಿದ್ದಾರೆ. ಇದೀಗ ದಂಡುಮಂಡಳಿ ದಿಢೀರ್ ಸಮೀಕ್ಷೆಗೆ ಮುಂದಾಗಿದ್ದು ರಾಜಕೀಯ ನಾಯಕರು ಹಾಗೂ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಮನೆಗಳ ಸರ್ವೇಗಾಗಿ ಸಮಿತಿ ರಚನೆಗೆ ಶಾಸಕ ಅನಿಲ್ ಬೆನಕೆ ಹಾಗೂ ದಂಡುಮಂಡಳಿಯ ಸದಸ್ಯರು ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದರು. ಅಲ್ಲದೇ, ಸಮಿತಿಯಲ್ಲಿ ನಮ್ಮನ್ನು ಸೇರಿಸಿಕೊಳ್ಳದಂತೆ ಸದಸ್ಯರು ಬ್ರಿಗೇಡಿಯರ್ ರೋಹಿತ್ ಚೌದರಿ ಹಾಗೂ ದಂಡುಮಂಡಳಿಯ ಸಿಇಒ ಬರ್ಚಸ್ವಾ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕಳೆದ ಹಲವು ದಶಕಗಳಿಂದ ದಂಡುಮಂಡಳಿ ಪ್ರದೇಶದಲ್ಲಿ 150ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿವೆ. ಏಕಾಏಕಿ ಸರ್ವೇ ಮಾಡುತ್ತಿರುವ ಉದ್ದೇಶವೇನು? ದಂಡುಮಂಡಳಿ ವ್ಯಾಪ್ತಿ ಮನೆಗಳನ್ನು ಎಂಎಲ್‍ಐಆರ್​​ಸಿ ವಶಪಡಿಸಿಕೊಳ್ಳಲಿದೆಯೇ? ತಾವು ವಶಪಡಿಸಿಕೊಂಡರೆ ಅಲ್ಲಿನ ನಿವಾಸಿಗಳು ಹೋಗುವುದೆಲ್ಲಿ ಎಂದು ಸಭೆಯಲ್ಲಿ ಸದಸ್ಯರು ಸಮಾಧಾನ ವ್ಯಕ್ತಪಡಿಸಿದರು. ಮನೆಗಳನ್ನು ವಶಪಡಿಸಿಕೊಳ್ಳುವ ಉದ್ದೇಶ ನಮ್ಮದಿಲ್ಲ. ಮನೆಗಳ ನವೀಕರಣ ಹಾಗೂ ಮನೆಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

ದಂಡುಮಂಡಳಿ ಸಾಮಾನ್ಯ ಸಭೆ

ಕೇಂದ್ರ ಸರ್ಕಾರದಿಂದಲೇ ಈ ಸಂಬಂಧ ನಿರ್ದೇಶನ ಬಂದಿದೆ. ಕೇವಲ ಬೆಳಗಾವಿ ದಂಡುಮಂಡಳಿಯ ಮನೆಗಳನ್ನು ಮಾತ್ರ ಸಮೀಕ್ಷೆಗೆ ಒಳಪಡಿಸುತ್ತಿಲ್ಲ. ದೇಶದಲ್ಲಿರುವ ಎಲ್ಲ ದಂಡುಮಂಡಳಿ ವ್ಯಾಪ್ತಿಯ ಮನೆಗಳು ಸಮೀಕ್ಷೆಗೆ ಒಳಪಡಲಿವೆ ಎಂದು ದಂಡುಮಂಡಳಿಯ ಸಿಇಒ ಬರ್ಚಸ್ವಾ ಸದಸ್ಯರನ್ನು ಮನವೊಳಿಸಿದರು. ಸಮೀಕ್ಷೆ ಕಾರ್ಯವನ್ನೇ ಕೈಬಿಡುವಂತೆ ಸದಸ್ಯರು ಪಟ್ಟು ಹಿಡಿದರು.

ಇಲ್ಲಿನ ನಿವಾಸಿಗಳಿಗೆ ಯಾವುದೇ ತೊಂದರೆ ಕೊಡುವುದಿಲ್ಲ ಎಂದು ಬ್ರಿಗೇಡಿಯರ್ ರೋಹಿತ್ ಚೌಧರಿ ಸಭೆಯಲ್ಲಿ ಭರವಸೆ ನೀಡಿದರು. ಸಭೆಯಲ್ಲಿ ಸಮಿತಿ ರಚನೆಗೆ ನಿರ್ಧಾರ ಕೈಗೊಳ್ಳಲಾಯಿತು. ಆದರೆ ಸಮಿತಿಯಲ್ಲಿ ಯಾವ ಸದಸ್ಯರನ್ನು ಸೇರಿಸಿಕೊಳ್ಳಬೇಡಿ ಎಂದು ಸಭೆ ಬಳಿಕ ಸದಸ್ಯರು ಸಿಇಒಗೆ ಮನವಿ ಸಲ್ಲಿಸಿದರು. ದಂಡುಮಂಡಳಿ ಏಕಾಏಕಿ ಸಮಿಕ್ಷೆಗೆ ಮುಂದಾಗಿರುವುದು ಜನಸಾಮಾನ್ಯರ ಜತೆಗೆ ರಾಜಕೀಯ ನಾಯಕರ ಆತಂಕಕ್ಕೂ ಕಾರಣವಾಗಿದೆ.

ABOUT THE AUTHOR

...view details