ಅಥಣಿ (ಬೆಳಗಾವಿ) :ಅಥಣಿ ತಾಲೂಕು ಕಲ್ಲುಗಣಿಗಾರಿಕೆಗೆ ಯೋಗ್ಯ ಸ್ಥಳ ಹೊಂದಿದ್ದರಿಂದ ಹೆಚ್ಚಾಗಿ ಇಲ್ಲಿ ಕ್ವಾರಿಗಳನ್ನು ನಿರ್ಮಿಸಲಾಗಿದೆ. ತಾಲೂಕಿನಾದ್ಯಂತ 24 ಅಧಿಕೃತ ಕಲ್ಲುಗಣಿಗಾರಿಕೆ ಕ್ವಾರಿಗಳಿಗೆ ಸರ್ಕಾರ ಅನುಮತಿ ನೀಡಿದೆ.
ಅಥಣಿಯಲ್ಲಿ ಮುಂಜಾಗ್ರತೆ ಇಲ್ಲದೆ ಜಿಲೆಟಿನ್ ಬಳಕೆ.. ಕಲ್ಲು ಗಣಿಗಾರಿಕೆ ನಡೆಸು ಗಣಿ ಗುತ್ತಿಗೆದಾರರು ತಮಗೆ ಮಂಜೂರಾದ ಪ್ರದೇಶದ ವ್ಯಾಪ್ತಿ ಮೀರಿ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿವೆ. ಅಕ್ರಮ ಕಲ್ಲುಗಣಿಗಾರಿಕೆ ಮಧ್ಯೆ ಅವ್ಯಾಹತವಾಗಿ ಜಿಲೆಟಿನ್ ಬಳಕೆ ನಡೆಯುತ್ತಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಕ್ವಾರಿಗಳ ಮೇಲೆ ಆಗಾಗ ತಪಾಸಣೆ ನಡೆಸುತ್ತಿಲ್ಲ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಓದಿ:ಆಪರೇಷನ್ ಕಮಲಕ್ಕೆ ಆಮಿಷ ಕೇಸ್: ಬಿಎಸ್ವೈ ವಿರುದ್ಧ ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್!
ರಾಜ್ಯದಲ್ಲಿ ಎರಡು ಕಡೆ ಜಿಲೆಟಿನ್ ಸ್ಫೋಟದಿಂದಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕ್ವಾರಿಗಳಲ್ಲಿ ಸ್ಫೋಟಕ ವಸ್ತುಗಳ ಬಳಕೆಗೆ ಹಲವಾರು ನಿಯಮಗಳನ್ನು ಜಾರಿ ಮಾಡಿದೆ. ಕ್ವಾರಿಗಳಲ್ಲಿ ಜಿಲೆಟಿನ್ ಬಳಕೆ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು ಹಾಗೂ ಬಿಸಿಲಿನಲ್ಲಿ ಜಿಲೆಟಿನ್ ಬಳಕೆ ಮಾಡಬಾರದೆಂದು ನಿಯಮವಿದ್ದರೂ, ಅಥಣಿ ತಾಲೂಕಿನಲ್ಲಿ ಮಟಮಟ ಮಧ್ಯಾಹ್ನವೇ ಜಿಲೆಟಿನ್ ಬಳಕೆ ಮಾಡಲಾಗುತ್ತಿದೆ.
ಅಲ್ಲದೇ ಸ್ಫೋಟಕ್ಕೆ ತಯಾರಿ ಮಾಡುತ್ತಿರುವ ದೃಶ್ಯ ಕೆಲವು ಕ್ವಾರಿಯಲ್ಲಿ ಕಂಡು ಬರುತ್ತದೆ. ಮತ್ತೊಂದು ದುರಂತ ಆಗುವ ಮೊದಲೇ ಬೆಳಗಾವಿ ಜಿಲ್ಲಾಡಳಿತ ಎಚ್ಚೆತ್ತು ಕ್ರಮಕ್ಕೆ ಮುಂದಾಗಬೇಕೆಂದು ಅಥಣಿ ಭಾಗದ ಜನತೆ ಆಗ್ರಹಿಸಿದ್ದಾರೆ.