ಕರ್ನಾಟಕ

karnataka

ETV Bharat / state

ಕಸ ವಿಲೇವಾರಿಗೆ ಕೋಟ್ಯಂತರ ವ್ಯಯ: ನನಸಾಗಿಲ್ಲ ಕುಂದಾನಗರಿ ಸ್ವಚ್ಛ ನಗರದ ಕನಸು

ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡ್‍ಗಳ ತ್ಯಾಜ್ಯ ನಿರ್ವಹಣೆಗೆ ಪ್ರತಿವರ್ಷ ₹ 20 ಕೋಟಿ ಮೀಸಲಿಟ್ಟಿದೆ. ಇಷ್ಟಾದರೂ ಕಸ ವಿಲೇವಾರಿ ಮಾತ್ರ ಸರಿಯಾಗಿ ಆಗುತ್ತಿಲ್ಲ. ಇತ್ತ ಸಾರ್ವಜನಿಕರಿಗೆ ಎಷ್ಟೇ ಅರಿವು ಮೂಡಿಸಿದರೂ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುತ್ತಿದ್ದಾರೆ. ಹೀಗಾಗಿ, ಪಾಲಿಕೆಗೆ ತಲೆ ನೋವಾಗಿ ಪರಿಣಮಿಸಿದೆ.

garbage problem in belagavi city
ಕಸ ವಿಲೇವಾರಿ

By

Published : Dec 11, 2020, 4:09 PM IST

ಬೆಳಗಾವಿ:ತ್ಯಾಜ್ಯ ವಿಲೇವಾರಿಗೆ ಬೆಳಗಾವಿ ಮಹಾನಗರ ಪಾಲಿಕೆ ಪ್ರತಿವರ್ಷ ಕೋಟಿ ಕೋಟಿ ಸುರಿಯುತ್ತಿದ್ದರೂ ಸ್ವಚ್ಛನಗರದ ಕನಸು ನನಸಾಗಿಲ್ಲ. ಅಸಮರ್ಪಕ ತ್ಯಾಜ್ಯ ವಿಲೇವಾರಿಯಿಂದ ನಗರವಾಸಿಗಳ ತೆರಿಗೆ ಹಣ ಹೊಳೆಯಲ್ಲಿ ಹುಣಸೆ ತೊಳೆದಂತಾಗಿದೆ.

ಕೇಂದ್ರ ಸರ್ಕಾರದ ಸ್ಮಾರ್ಟ್‍ಸಿಟಿ ಹಾಗೂ ಅಮೃತ್ ಸಿಟಿಯಂತಹ ಯೋಜನೆಗೆ ಕುಂದಾನಗರಿ ಬೆಳಗಾವಿ ಒಳಪಟ್ಟಿದೆ. ಇದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ನಗರಕ್ಕೆ ಪ್ರತಿ ವರ್ಷ ನೂರಾರು ಕೋಟಿ ಹರಿದು ಬರುತ್ತಿದೆ. ಅಲ್ಲದೇ, ನಗರೋತ್ಥಾನ ಯೋಜನೆಯಡಿಯೂ ನಗರಕ್ಕೆ ಪ್ರತಿವರ್ಷ ರಾಜ್ಯ ಸರ್ಕಾರದಿಂದ ₹125 ಕೋಟಿ ಬಿಡುಗಡೆಯಾಗುತ್ತಿದೆ.

ನಗರ ವಾಸಿಗಳಿಂದ ಸಂಗ್ರಹವಾಗುವ ತೆರಿಗೆ ಹಣವೂ ₹60 ಕೋಟಿ ಮೀರುತ್ತದೆ. ಇದರಲ್ಲಿ ₹20 ಕೋಟಿ ಪ್ರತಿವರ್ಷ ಕಸವಿಲೇವಾರಿಗೆ ಮೀಸಲಿಡಲಾಗುತ್ತಿದೆ. ಇಷ್ಟೆಲ್ಲ ಹಣ ವ್ಯಯವಾಗುತ್ತಿದ್ದರೂ, ಕಸ ವಿಲೇವಾರಿ ವಿಚಾರದಲ್ಲಿ ಮಹಾನಗರ ಪಾಲಿಕೆಯಿಂದ ಸಮರ್ಪಕ ಕೆಲಸವಾಗುತ್ತಿಲ್ಲ. ಇದು ನಗರವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಕಸ ವಿಲೇವಾರಿಗೆ ₹20 ಕೋಟಿ ವೆಚ್ಚ:58 ವಾರ್ಡ್‍ಗಳನ್ನು ಹೊಂದಿರುವ ಪಾಲಿಕೆ ತ್ಯಾಜ್ಯ ನಿರ್ವಹಣೆಗೆ ವರ್ಷಕ್ಕೆ ಬರೊಬ್ಬರಿ ₹20 ಕೋಟಿ ವೆಚ್ಚ ಮಾಡುತ್ತದೆ. ನಗರದಲ್ಲಿ 11 ವಾರ್ಡ್‍ಗಳಲ್ಲಿ 164 ಕಾಯಂ ಪೌರ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ 47 ವಾರ್ಡ್‍ಗಳಲ್ಲಿ 600ಕ್ಕೂ ಅಧಿಕ ಗುತ್ತಿಗೆ ಆಧಾರದ ಕಾರ್ಮಿಕರಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಕೆ.ಎಚ್​.ಜಗದೀಶ್​

ಪಾಲಿಕೆಯ ಮೂವರು ಪರಿಸರ ಇಂಜಿನಿಯರ್, 15 ಆರೋಗ್ಯ ನಿರೀಕ್ಷಕರು ಹಾಗೂ ತ್ಯಾಜ್ಯ ನಿರ್ವಹಣೆ ಉಸ್ತುವಾರಿ ನೋಡಿಕೊಳ್ಳಲು 30 ಸಿಬ್ಬಂದಿ ಇದ್ದಾರೆ. ಬೆಳಗ್ಗೆ ಆರು ಗಂಟೆಯಿಂದ ತ್ಯಾಜ್ಯ ಸಂಗ್ರಹ ಕೆಲಸ ಆರಂಭವಾಗುತ್ತದೆ. ಮಾರುಕಟ್ಟೆ, ಹೋಟೆಲ್‍ಗಳ ತ್ಯಾಜ್ಯ ಸಂಗ್ರಹಕ್ಕೆ ವಿಶೇಷ ತಂಡ ನೇಮಿಸಲಾಗಿದೆ. ಇನ್ನು ನಗರದ ಪ್ರತಿ ಬಡಾವಣೆಯಲ್ಲೂ ಮನೆಮನೆಗೂ ಹೋಗಿ ಕಸ ಸಂಗ್ರಹಿಸಲಾಗುತ್ತಿದೆ. ಕೆಲವೆಡೆ ಆ ಕೆಲಸ ಸರಿಯಾಗಿ ಆಗದ ಕಾರಣ ಸ್ಥಳೀಯರು ಕಸವನ್ನು ಖಾಲಿ ಜಾಗದಲ್ಲಿ ಎಸೆಯುತ್ತಿದ್ದಾರೆ.

ಜಾಗೃತಿ ಕೊರತೆ:ಬೆಳಗಾವಿ ಸ್ಮಾರ್ಟ್‍ ಸಿಟಿಯಾಗಿ ಪರಿವರ್ತನೆಗೊಳ್ಳುತ್ತಿದೆ. ಕೆಲವೆಡೆ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸದ ಕಾರಣ ಜನರು ಮನೆಯ ಕಸ ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಈ ಸಂಬಂಧ ಪಾಲಿಕೆಯಿಂದಲೂ ಜನರಲ್ಲಿ ಜಾಗೃತಿ ಮೂಡಿಸುವುದಾಗಲಿ ಅಥವಾ ಕಸ ಎಲ್ಲೆಂದರಲ್ಲಿ ಚೆಲ್ಲುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತಿಲ್ಲ. ತ್ಯಾಜ್ಯ ನಿರ್ವಹಣೆಯಲ್ಲಿನ ಲೋಪಗಳಿಂದ ನಗರದ ನೈರ್ಮಲ್ಯ ಸುಧಾರಣೆ ಕಾಣುತ್ತಿಲ್ಲ.

ಈ ಕುರಿತು ಈಟಿವಿ ಭಾರತ ಜೊತೆಗೆ ಮಾತನಾಡಿದ ಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ್​​, ಕಸ ನಿರ್ವಹಣೆಗೆ ಪ್ರತಿವರ್ಷ ₹20 ಕೋಟಿ ವೆಚ್ಚ ಮಾಡಲಾಗುತ್ತಿದೆ. ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿದ ಬಳಿಕ ಈ ಕಸವನ್ನು ಬೆಳಗಾವಿ ತಾಲೂಕಿನ ತುರುಮುರಿ ಪ್ಲಾಂಟ್‍ಗೆ ಕಳಿಸಲಾಗುತ್ತದೆ. ಕಸ ವಿಲೇವಾರಿಗೆ ಇನ್ನೂ ಪಾಲಿಕೆಯಿಂದ 36 ಟಿಪ್ಪರ್ ಖರೀದಿಸಲಾಗುತ್ತಿದ್ದು, ಸಮಸ್ಯೆ ಬಗೆಹರಿಯಲಿದೆ ಎಂದರು.

ABOUT THE AUTHOR

...view details