ಬೆಳಗಾವಿ: ಅದೆಷ್ಟೋ ಮಕ್ಕಳು ಮನೆಯಲ್ಲಿ ಬಡತನ ಸೇರಿದಂತೆ ಮತ್ತಿತರ ಕಾರಣಗಳಿಂದ ಕಲಿಕೆಯಿಂದ ದೂರ ಉಳಿಯುತ್ತಿದ್ದಾರೆ. ಇಂತಹ ಮಕ್ಕಳು ಅಡ್ಡದಾರಿ ಹಿಡಿದು ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಬಾರದು ಎಂದು ಬೆಳಗಾವಿಯಲ್ಲಿ ಗಣೇಶ ಮೂರ್ತಿಯ ಮೂಲಕ ಶೈಕ್ಷಣಿಕ ಜಾಗೃತಿ ಮೂಡಿಸುತ್ತಿರುವುದು ಎಲ್ಲರ ಗಮನ ಸೆಳೆಯುತ್ತಿದೆ.
ಹೌದು, ಇಡೀ ರಾಜ್ಯದಲ್ಲೇ ವಿಶೇಷವಾಗಿ ಬೆಳಗಾವಿಯಲ್ಲಿ ಗಣೇಶೋತ್ಸವ ಆಚರಿಸಲಾಗುತ್ತದೆ. ಇಲ್ಲಿನ ಗಣೇಶ ಮಂಡಳಿಗಳು ಸಾಮಾಜಿಕ, ಆಧ್ಯಾತ್ಮಿಕ, ಆರೋಗ್ಯ ಸೇವೆ ಸಲ್ಲಿಸುವ ಜೊತೆಗೆ ಶಿಕ್ಷಣದ ಮಹತ್ವವನ್ನು ಸಾರುತ್ತಿವೆ. ಕುಲಕರ್ಣಿ ಗಲ್ಲಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳಿ ಇಂತಹದ್ದೊಂದು ವಿಭಿನ್ನ ಕಾರ್ಯಕ್ಕೆ ಮುಂದಾಗಿದೆ. ಬಾಲಕನೋರ್ವ ತನ್ನ ತಲೆ ಮೇಲೆ ಹೊತ್ತಿರುವ ಮೂಟೆಯನ್ನು ಗಣಪ ತನ್ನ ಕೈಗಳಿಂದ ತೆಗೆದುಕೊಳ್ಳಲು ಮುಂದಾಗಿರುವ ಮೂಲಕ ಬಾಲ ಕಾರ್ಮಿಕ ಪದ್ಧತಿಯನ್ನು ನಿಲ್ಲಿಸಬೇಕೆಂಬ ಸಂದೇಶ ಸಾರುವ ಮೂರ್ತಿಯನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಅಲ್ಲಿಯೇ ಕೆಳಗೆ ಬಾಲಕಿ ಪಾತ್ರೆ ತೊಳೆಯುತ್ತಿರುವುದು, ಮತ್ತೊಂದೆಡೆ ಬಾಲಕ ಇಟ್ಟಿಗೆ ಹೊತ್ತಿರುವುದು, ಯುವಕನೊಬ್ಬ ಕಳ್ಳತನ ಕೃತ್ಯವೆಸಗಿ ಓಡಿ ಹೋಗುತ್ತಿರುವುದು ಕಂಡು ಬಂದರೆ, ಇನ್ನೊಂದೆಡೆ ವಿದ್ಯೆ ಕಲಿತರೆ ವಿಜ್ಞಾನಿ, ವೈದ್ಯ, ವಕೀಲ, ಎಂಜಿನಿಯರ್ ಸೇರಿ ಉನ್ನತ ಸ್ಥಾನಗಳನ್ನು ಪಡೆಯಬಹುದು ಎಂಬುದನ್ನು ಅತ್ಯಂತ ಅರ್ಥಪೂರ್ಣ ಚಿತ್ರಗಳ ಮೂಲಕ ಮಂಡಳಿಯವರು ಪ್ರದರ್ಶಿಸಿದ್ದಾರೆ.
ದೇಶವು ಅದೆಷ್ಟೇ ಅಭಿವೃದ್ಧಿ ಹೊಂದಿದರೂ ಬಾಲಕಾರ್ಮಿಕ ಪದ್ಧತಿ ಮಾತ್ರ ಇನ್ನೂ ಜೀವಂತವಾಗಿದ್ದು, ಇದು ನಿರ್ಮೂಲನೆ ಆಗಬೇಕು ಎಂಬ ಸಂದೇಶದ ಬರಹಗಳು ಎಲ್ಲರನ್ನೂ ಜಾಗೃತಿಗೊಳಿಸುತ್ತಿವೆ. ಈ ದೃಶ್ಯ ಕಣ್ತುಂಬಿಕೊಳ್ಳಲು ದಿನನಿತ್ಯ ನೂರಾರು ಜನರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಪ್ರತಿವರ್ಷವೂ ಇದೇ ರೀತಿ ಒಂದಿಲ್ಲೊಂದು ವಿಷಯವನ್ನು ಇಟ್ಟಿಕೊಂಡು ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿರುವ ಕುಲಕರ್ಣಿ ಗಲ್ಲಿ ಗಣೇಶ ಮಂಡಳಿಯವರು ಈ ಬಾರಿಯೂ ತಮ್ಮ ಪರಂಪರೆ ಮುಂದುವರಿಸಿಕೊಂಡು ಬಂದಿದ್ದಾರೆ.