ಅಥಣಿ:ವಿಘ್ನ ವಿನಾಶಕನನ್ನು ನೆನೆದರೆ, ಯಾವುದೇ ಕಾರ್ಯಕ್ರಮಕ್ಕೂ ವಿಘ್ನ ಇಲ್ಲದೇ ಕೆಲಸ ಸಲಿಸಲಾಗುತ್ತದೆ ಎಂಬ ಮಾತಿದೆ. ಆದರೆ, ಇದೇ ಮಾತು ಸದ್ಯ ಗಣಪತಿ ಮೂರ್ತಿ ತಯಾರಿಸುವ ಕುಟುಂಬಕ್ಕೆ ಅಕ್ಷರಶಃ ಸುಳ್ಳಾಗಿದೆ.
ಅಥಣಿ ಪಟ್ಟಣದಲ್ಲಿ ಹದಿನೈದು ಬಡಿಗೇರ ಕುಟುಂಬ ವಂಶಪಾರಂಪರಿಕವಾಗಿ ಗಣೇಶ ಮೂರ್ತಿ ತಯಾರಿ ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡಿವೆ. ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಹಲವು ನಿಯಮ ಹೊರಡಿಸಿದ ಬೆನ್ನಲ್ಲೆ ಮೂರ್ತಿ ತಯಾರಿಕೆ ಕಾಯಕದಲ್ಲಿ ತೊಡಗಿರುವ ಕುಂಟುಂಬಗಳಿಗೆ ಆಘಾತವನ್ನುಂಟು ಮಾಡಿದೆ.
ಸಂಕಷ್ಟದಲ್ಲಿ ಗಣೇಶ ಮೂರ್ತಿ ತಯಾರಿಸುವ ಕುಟುಂಬಗಳು ಸರ್ಕಾರದ ನಿಯಮಕ್ಕೆ ಕೆಲವರು ಹೆದರಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಮುಂದೆ ಬರುತ್ತಿಲ್ಲ. ಬೇಡಿಕೆ ಇಲ್ಲದೇ ಈ ವರ್ಷ ನಮಗೆ ಭಾರಿ ನಷ್ಟ ಸಂಭವಿಸಿದೆ ಎಂದು ಬಡಿಗೇರ ಕುಟುಂಬ ಕಳವಳ ವ್ಯಕ್ತಪಡಿಸಿದೆ.
ಗಣೇಶ ಚತುರ್ಥಿ ಆಚರಣೆ ಬಂತು ಎಂದರೆ ಹಬ್ಬದ ವಾತಾವರಣ ನಿರ್ಮಾಣವಾಗಿರುತ್ತಿತ್ತು. ಆದರೆ, ಈ ಕೊವಿಡ್-19 ನಿಂದ ಯಾರೂ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾಗುತ್ತಿಲ್ಲ. ಮೂರು ತಿಂಗಳಿಂದ ಮಕ್ಕಳು, ನಾವು ಜೊತೆಯಾಗಿ ಕಾರ್ಯದಲ್ಲಿ ನಿರತವಾಗಿದ್ದು, ಕಾರ್ಯಕ್ಕೆ ತಕ್ಕ ಪ್ರತಿಫಲವಿಲ್ಲದೇ ತುಂಬಾ ನಿರಾಸೆ ಮೂಡಿಸಿದೆ. ರಾಜ್ಯ ಸರ್ಕಾರ ಗಣೇಶ ಮೂರ್ತಿ ತಯಾರಿಸುವ ಕುಟುಂಬಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.