ಬೆಳಗಾವಿ : ಬೆಳಗಾವಿಯಲ್ಲಿ ಗಣೇಶ ಮೂರ್ತಿಗಳ ನಿಮಜ್ಜನ ಮೆರವಣಿಗೆ ದಾಖಲೆ ಬರೆದಿದೆ. ಸತತ 30 ಗಂಟೆಗಳ ಕಾಲ ಗಣೇಶನನ್ನು ಮೆರವಣಿಗೆ ನಡೆಸಿ ಕುಂದಾನಗರಿ ಜನ ಅದ್ಧೂರಿಯಾಗಿ ಬೀಳ್ಕೊಟ್ಟರು. 10 ದಿನಗಳ ಕಾಲ ಭಕ್ತಿಯಿಂದ ಗಣಪತಿಯನ್ನು ಪೂಜಿಸಿದ ಭಕ್ತರು ಏಕದಂತನನ್ನು ಸಂಭ್ರಮದಿಂದ ನಿಮಜ್ಜನ ಮಾಡಿದರು. ಗುರುವಾರ ಸಂಜೆ 5 ಗಂಟೆಗೆ ಆರಂಭಗೊಂಡ ಮೆರವಣಿಗೆಯು ಶುಕ್ರವಾರ ರಾತ್ರಿ 9.45ರ ವರೆಗೂ ನಡೆಯಿತು. ಅಂದಾಜು 30 ಗಂಟೆಗೂ ಅಧಿಕ ಕಾಲ ಮೆರವಣಿಗೆ ನಡೆದಿದ್ದು ವಿಶೇಷವಾಗಿತ್ತು.
ನಗರದಾದ್ಯಂತ 378 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಶಹಾಪುರದ ಕಪಿಲೇಶ್ವರ ದೇವಸ್ಥಾನದ ಬಳಿಯ ಹೊಸ ಮತ್ತು ಹಳೆಯ ಹೊಂಡ, ಇಂದ್ರಪ್ರಸ್ಥ ನಗರದ ಜಕ್ಕೇರಿಹೊಂಡ, ಅನಗೋಳ ಕೆರೆ, ಕೋಟೆ ಕೆರೆ ಸೇರಿದಂತೆ 8 ಕಡೆಗಳಲ್ಲಿ ಮೂರ್ತಿಗಳನ್ನು ನಿಮಜ್ಜನ ಮಾಡಲಾಯಿತು. ಬೃಹದಾಕಾರದ ಮೂರ್ತಿಗಳನ್ನು ಕ್ರೇನ್ ಸಹಾಯದಿಂದ ನಿಮಜ್ಜನ ಮಾಡಿದರು.
ಕಣ್ಮನ ಸೆಳೆದ ಮೆರವಣಿಗೆ : ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಮಳೆ ನಡುವೆಯೂ ಡಿಜೆ ಹಾಡುಗಳಿಗೆ ಯುವಕ-ಯುವತಿಯರು ಹುಚ್ಚೆದ್ದು ಕುಣಿದರು. ಗಣಪತಿ ಬಪ್ಪ ಮೋರಯಾ ಎಂಬ ಘೋಷಣೆಗಳು ಮುಗಿಲು ಮುಟ್ಟಿತ್ತು. ಪಟಾಕಿ, ಸಿಡಿಮದ್ದುಗಳನ್ನು ಸಿಡಿಸಿ ಯುವಕರು ಸಂಭ್ರಮಿಸಿದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತು ಜನ ಮೆರವಣಿಗೆಯನ್ನು ಕಣ್ತುಂಬಿಕೊಂಡರು.
ಕೊನೆಯದಾಗಿ ಪಾಲಿಕೆ ಗಣಪನ ವಿಸರ್ಜನೆ :ನಗರದ ವಿವಿಧ ಮಂಡಳಿಗಳ ಗಣೇಶ ಮೂರ್ತಿಗಳ ನಿಮಜ್ಜನ ಮಾಡಿದ ಬಳಿಕ ಮಹಾನಗರ ಪಾಲಿಕೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಕಪಿಲೇಶ್ವರದ ಹೊಸ ಹೊಂಡದಲ್ಲಿ ನಿಮಜ್ಜನ ಮಾಡಲಾಯಿತು.