ಕರ್ನಾಟಕ

karnataka

ETV Bharat / state

ಗಾಂಧಿ ಭೇಟಿ ನೀಡಿದ ಸ್ಥಳಗಳ ಅಭಿವೃದ್ಧಿಗಾಗಿ ಶಾಸಕ ಅಭಯ ಪಾಟೀಲ್​ ಮಂಡಿಸಿದ ಖಾಸಗಿ ಬಿಲ್ ಅಂಗೀಕಾರ

ಗಾಂಧಿ ಭೇಟಿ ನೀಡಿದ ಸ್ಥಳಗಳ ಅಭಿವೃದ್ಧಿಗಾಗಿ ವಿಧಾನಸಭೆಯಲ್ಲಿ ಮಂಡಿಸಿದ ಖಾಸಗಿ ಮಸೂದೆ ಅಂಗೀಕರಿಸಲಾಗಿದೆ.

ಗಾಂಧಿ ಭೇಟಿ ನೀಡಿದ ಸ್ಥಳಗಳ ಅಭಿವೃದ್ಧಿ ಬಿಲ್​ ಅಂಗೀಕಾರ
ಗಾಂಧಿ ಭೇಟಿ ನೀಡಿದ ಸ್ಥಳಗಳ ಅಭಿವೃದ್ಧಿ ಬಿಲ್​ ಅಂಗೀಕಾರ

By ETV Bharat Karnataka Team

Published : Dec 15, 2023, 8:47 AM IST

ಬೆಳಗಾವಿ/ ಬೆಂಗಳೂರು: ಮಹಾತ್ಮಗಾಂಧೀಜಿಯವರು ಭೇಟಿ ನೀಡಿದ ಸ್ಥಳಗಳನ್ನು ಸ್ಮಾರಕವಾಗಿ ರೂಪಿಸಲು ಕ್ರಮವಹಿಸಬೇಕು ಎಂಬ ಕೈ ಶಾಸಕ ಅಭಯ ಪಾಟೀಲ್ ಮಂಡಿಸಿದ ಖಾಸಗಿ ಮಸೂದೆ ವಿಧಾನಸಭೆಯಲ್ಲಿ ಅಂಗೀಕೃತಗೊಂಡಿದೆ.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಬೆಳಗಾವಿಗೆ ಭೇಟಿ ನೀಡಿದ ಸವಿ ನೆನಪಿಗಾಗಿ ರಾಜ್ಯ ಸರ್ಕಾರ ಶತಮಾನೋತ್ಸವ ಸಂಭ್ರಮ ಆಚರಿಸಲು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಅನುದಾನ ಬಿಡುಗಡೆ ಮಾಡಬೇಕು ಮತ್ತು ಮಹಾತ್ಮ ಗಾಂಧೀಜಿಯವರು ಭೇಟಿ ನೀಡಿದ ಸ್ಥಳಗಳನ್ನು ಅಭಿವೃದ್ಧಿಪಡಿಸಲು ಮತ್ತು ಭಾಗವಹಿಸಿದ ಸ್ಥಳವನ್ನು ಸ್ಮಾರಕವಾಗಿ ರೂಪಿಸಲು ಕ್ರಮವಹಿಸಬೇಕು ಎಂದು ಬೆಳಗಾವಿ ದಕ್ಷಿಣ ಕ್ಷೇತ್ರ ಶಾಸಕ ಅಭಯ ಪಾಟೀಲ್​ ಅವರು ವಿಧಾನಸಭೆಯಲ್ಲಿಂದು ಖಾಸಗಿ ಬಿಲ್ ಮಂಡಿಸಿದರು.

ಮಹಾತ್ಮ ಗಾಂಧೀಜಿಯವರು 1924ರ ಡಿಸೆಂಬರ್ 26ರಂದು ಬೆಳಗಾವಿಗೆ ಭೇಟಿ ನೀಡಿ ಬೆಳಗಾವಿಯಲ್ಲಿ ಜರುಗಿದ 39ನೇ ಭಾರತೀಯ ರಾಷ್ಟೀಯ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಬರುವ ಡಿಸೆಂಬರ್ 26ಕ್ಕೆ ನೂರು ವರ್ಷಗಳು ಪೂರೈಸುತ್ತಿವೆ. ಈ ಭೇಟಿಯ ಸವಿನೆನಪಿನ ನಿಮಿತ್ತ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಇದಕ್ಕೆ ಉತ್ತರಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಬರುವ ಆಯವ್ಯಯದಲ್ಲಿ ವಿಶೇಷ ಅನುದಾನ ಪೂರೈಸಲು ಕ್ರಮವಹಿಸಲಾಗುವುದು ಮತ್ತು ಈ ಶತಮಾನೋತ್ಸವದ ಸವಿ ನೆನಪಿಗಾಗಿ ವರ್ಷಪೂರ್ತಿ ಕಾರ್ಯಕ್ರಮಗಳನ್ನು ಆಯೋಜಿಸಲು ಕ್ರಿಯಾ ಯೋಜನೆ ರೂಪಿಸಲಾಗುವುದು. ಈ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರವು ನೆರವು ನೀಡಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಬಳಿಕ ಸದನ ಖಾಸಗಿ ಬಿಲ್ ಗಳನ್ನು ಅಂಗೀಕರಿಸಿದೆ ಎಂದು ವಿಧಾನಸಭಾ ಸಭಾಧ್ಯಕ್ಷ ಯು.ಟಿ. ಖಾದರ್ ಪ್ರಕಟಿಸಿದರು.

10 ವಿವಿಧ ಮಸೂದೆಗಳ ಅಂಗೀಕಾರ:ಸದ್ಯ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವಿಧಾನಸಭೆಯ 8ನೇ ದಿನ (ಬುಧವಾರ) 10 ವಿವಿಧ ಮಸೂದೆಗಳಿಗೆ ಅಂಗೀಕಾರ ನೀಡಲಾಗಿತ್ತು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂಡಿಸಿದ 2023 ನೇ ಸಾಲಿನ ಬೃಹತ್​​ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ, ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಮಂಡಿಸಿದ 2023ನೇ ಸಾಲಿನ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ ಹಾಗೂ 2023ನೇ ಸಾಲಿನ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (2ನೇ ತಿದ್ದುಪಡಿ) ವಿಧೇಯಕ ಅಂಗೀಕರಿಸಲಾಗಿತ್ತು.

ಇದನ್ನೂ ಓದಿ:ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ವಿಧೇಯಕ-2023 ಸೇರಿ ಹಲವು ವಿಧೇಯಕಗಳು ಪರಿಷತ್​ನಲ್ಲಿ ಅಂಗೀಕಾರ

ABOUT THE AUTHOR

...view details