ಹುದಲಿ ಗ್ರಾಮಕ್ಕೆ ಭೇಟಿ ನೀಡಿದ್ದ ಗಾಂಧೀಜಿ ಬೆಳಗಾವಿ: ಇದು ಮಹಾತ್ಮ ಗಾಂಧೀಜಿ ಕಾಲಿಟ್ಟ ಊರು. ಖಾದಿ ಇಲ್ಲಿನ ಜನರ ಉಸಿರು. ಇಲ್ಲಿನ ಮನೆ – ಮನದಲ್ಲೂ ಪಠಿಸುತ್ತಿದೆ ಗಾಂಧಿ ಮಂತ್ರ. ಅಷ್ಟಕ್ಕೂ ಆ ಗಾಂಧಿ ಗ್ರಾಮ ಯಾವುದು? ರಾಷ್ಟ್ರಪಿತ ಅಲ್ಲಿಗೆ ಬಂದಿದ್ದೇಕೆ? ಎಷ್ಟು ದಿನ ತಂಗಿದ್ದರು? ಎಂಬುದನ್ನು ತಿಳಿಯುವ ಕುತೂಹಲವೇ. ಹಾಗಾದರೆ ಇದನ್ನು ಓದಿ
ಈ ಅಪರೂಪದ ಊರಿನ ಹೆಸರು ಹುದಲಿ. ಬೆಳಗಾವಿಯಿಂದ 22 ಕಿ.ಮೀ. ಅಂತರದಲ್ಲಿರುವ ಇದು ಕ್ರಾಂತಿಯ ನೆಲ, ಸ್ವಾತಂತ್ರ್ಯ ಹೋರಾಟಗಾರರ ತವರು, ಖಾದಿಗೆ ಪುನಶ್ಚೇತನ ನೀಡಿದ ನಾಡು ಹೀಗೆ ನಾನಾ ಬಿರುದುಗಳು ಈ ಗ್ರಾಮಕ್ಕಿವೆ. ‘ಕರ್ನಾಟಕ ಸಿಂಹ’ ಖ್ಯಾತಿಯ ಗಂಗಾಧರರಾವ್ ದೇಶಪಾಂಡೆ ಅವರನ್ನು ನಾಡಿಗೆ ಕೊಡುಗೆಯಾಗಿ ಅರ್ಪಿಸಿದ ಶ್ರೇಯವೂ ಇದಕ್ಕೆ ಸಲ್ಲುತ್ತದೆ. ಗಾಂಧೀಜಿ ಈ ಊರಿಗೆ ಬರಲು ಕಾರಣವೂ ದೇಶಪಾಂಡೆಯವರೇ.
ಗಾಂಧೀಜಿ ಅವರ ಜೊತೆಗೆ ನಿಕಟ ಬಾಂಧವ್ಯ ಹೊಂದಿದ್ದ ದೇಶಪಾಂಡೆ ಸತತ ಪ್ರಯತ್ನದಿಂದಾಗಿ ಬೆಳಗಾವಿಯಲ್ಲಿ 1924ರಲ್ಲಿ ಮೊದಲ ಕಾಂಗ್ರೆಸ್ ಅಧಿವೇಶನ ನಡೆದಿತ್ತು. ಇದು ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಏಕೈಕ ಅಧಿವೇಶನವೂ ಹೌದು. ಗಾಂಧಿ ಅವರನ್ನು ಬೆಳಗಾವಿಗೆ ಕರೆಯಿಸಿ ದೇಶಪಾಂಡೆ ಸುಮ್ಮನಾಗಲಿಲ್ಲ. ತಮ್ಮ ಹುಟ್ಟೂರಿಗೆ ಕರೆತರುವುದು ಅವರ ಮಹದಾಸೆಯಾಗಿತ್ತು.
ಹಾಗಾಗಿ ಸ್ನೇಹಿತರಾದ ಪುಂಡಲೀಕ ಖಾತಗಡೆ ಮತ್ತು ರಾಮಚಂದ್ರ ವಡವಿ ಅವರೊಂದಿಗೆ ಸೇರಿಕೊಂಡು ಮನವೊಲಿಸಿ, 1937ರಲ್ಲಿ ಗಾಂಧಿ ಅವರನ್ನು ಹುದಲಿಗೆ ಕರೆತಂದು, ಗಾಂಧಿಸೇವಾ ಸಂಘದ ಸಮ್ಮೇಳನ ಆಯೋಜಿಸಿದರು. ಏಪ್ರಿಲ್ 17ರಿಂದ 23ರವರೆಗೆ 7 ದಿನಗಳ ಕಾಲ ನಡೆದ ಈ ಸಮ್ಮೇಳನಕ್ಕೆ ದೇಶದ ಘಟಾನುಘಟಿ ಸ್ವಾತಂತ್ರ್ಯ ಹೋರಾಟಗಾರರ ದಂಡೇ ಹರಿದು ಬಂದಿತ್ತು. ಊರಿಗೆ ಊರೇ ಗಾಂಧಿಮಯವಾಗಿತ್ತು. ಜನರಲ್ಲಿ ಸ್ವಾತಂತ್ರ್ಯದ ಕಿಡಿ ಹೊತ್ತಿಸುವ ಜತೆಗೆ, ಸ್ವದೇಶಿ ವಸ್ತುಗಳ ಬಳಕೆಗೆ ಗಾಂಧಿ ಕರೆ ನೀಡಿದ್ದರು.
ಗಾಂಧೀಜಿ ಕೇವಲ ಭಾಷಣಕ್ಕೆ ಸೀಮಿತಗೊಳ್ಳದೆ, ಸ್ವತಃ ಸಲಿಕೆ–ಗುದ್ದಲಿ ಹಿಡಿದು ಗ್ರಾಮಸ್ಥರೊಂದಿಗೆ ಶ್ರಮದಾನಕ್ಕೆ ಇಳಿಯುತ್ತಿದ್ದರು. ಚರಕ ನೂಲುತ್ತಿದ್ದರು. ಹೊಸ ಬಾವಿಗೆ ಭೂಮಿಪೂಜೆ ನೆರವೇರಿಸಿದ್ದರು. ಗುಡಿ ಕೈಗಾರಿಕೆಯ ಪುಟ್ಟ ಪ್ರದರ್ಶನಕ್ಕೆ ಚಾಲನೆ ನೀಡಿದ್ದರು. ಗಾಂಧೀಜಿ ಪ್ರೇರಣೆಯಿಂದಾಗಿ ಜೀವತಳೆದ ಖಾದಿ ಉತ್ಪಾದಕರ ಸಹಕಾರ ಸಂಘ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ನೂರಾರು ದುಡಿಯುವ ಕೈಗಳಿಗೆ ಅನ್ನ ಕೊಟ್ಟಿದೆ.
ಸಮ್ಮೇಳನ ನಡೆದ ಸ್ಥಳದಲ್ಲೀಗ ಸ್ಮಾರಕ ತಲೆ ಎತ್ತಿದೆ. ಅದಕ್ಕೆ ‘ಗಾಂಧಿ ಗಂಗಾಧರರಾವ್ ದೇಶಪಾಂಡೆ ಭವನ’ ಎಂದು ನಾಮಕರಣ ಮಾಡಲಾಗಿದೆ. ಒಳಾಂಗಣದಲ್ಲಿ ಗಾಂಧೀಜಿ ಮತ್ತು ದೇಶಪಾಂಡೆ ಅವರ ಪುತ್ಥಳಿಗಳಿವೆ. ಗಾಂಧೀಜಿ ಅವರ ಜೀವನ ಮತ್ತು ಸ್ವಾತಂತ್ರ್ಯ ಹೋರಾಟದ ಮೇಲೆ ಬೆಳಕು ಚೆಲ್ಲುವ ಅಪರೂಪದ ಭಾವಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.
ಕೆಸರಿನಲ್ಲೆ ನಡೆದು ಬಂದಿದ್ದ ಗಾಂಧೀಜಿ:ಹುದಲಿ ಸಮ್ಮೇಳನದಲ್ಲಿ ಭಾಗಿಯಾಗಲು ಸುಲಧಾಳ ರೈಲ್ವೆ ಸ್ಟೇಷನ್‌ಗೆ ಬಂದಿಳಿದ ಮಹಾತ್ಮಾ ಗಾಂಧಿ ಅವರನ್ನು ಸ್ವಾಗತಿಸಲು ಗಂಗಾಧರರಾವ್ ದೇಶಪಾಂಡೆ ಕುದುರೆ ಸಾರೋಟು ತೆಗೆದುಕೊಂಡು ಬಂದಿದ್ದರು. ಆದರೆ, ಅದನ್ನೇರಲು ನಿರಾಕರಿಸಿದ ಗಾಂಧೀಜಿ ಕೆಸರುಮಯ ರಸ್ತೆಯಲ್ಲೇ ಗ್ರಾಮಕ್ಕೆ ಎಲ್ಲರೊಟ್ಟಿಗೆ ನಡೆದುಕೊಂಡು ಬಂದರು. ಈ ವೇಳೆ ರಾಷ್ಟ್ರ ನಾಯಕರಾದ ಡಾ.ಬಾಬು ರಾಜೇಂದ್ರಪ್ರಸಾದ, ಅಬ್ದುಲ್ ಗಫಾರ್‌ಖಾನ್ ಗಾಂಧಿ, ಸರ್ದಾರ್ ವಲ್ಲಭಬಾಯಿ ಪಟೇಲ್, ಶೌಕತ್ ಅಲಿ, ಸರೋಜಿನಿ ನಾಯ್ಡು, ಹಿರಿಯ ಸಾಹಿತಿಗಳಾದ ಬೆಟಗೇರಿ ಕೃಷ್ಣಶರ್ಮ, ಜಿ. ನಾರಾಯಣ ಸೇರಿ ಅನೇಕ ನಾಯಕರು ಸಮ್ಮೇಳನಕ್ಕೆ ಸಾಕ್ಷಿಯಾಗಿದ್ದರು.
ಸಮ್ಮೇಳನಕ್ಕೆ ಬಂದಿದ್ದ ಸ್ವಾತಂತ್ರ್ಯ ಹೋರಾಟಗಾರರು ತಂಗಲು ಮಾಲದಂಡಿ ಜೋಳದ ದಂಟಿನಿಂದ 250ಕ್ಕೂ ಅಧಿಕ ಗುಡಿಸಲನ್ನು ಗ್ರಾಮಸ್ಥರು ನಿರ್ಮಿಸಿದ್ದರು. ಆದರೆ, ಬಿರುಗಾಳಿ ಸಹಿತ ಭಾರಿ ಮಳೆ ಬಿದ್ದಿದ್ದರಿಂದ ಸಮ್ಮೇಳನದ ಮೊದಲ ದಿನವೇ ಎಲ್ಲವೂ ನೆಲಸಮವಾದವು. ನಂತರ ತಮ್ಮ ಮನೆಗಳಲ್ಲಿ ಹೋರಾಟಗಾರಿಗೆ ಗ್ರಾಮಸ್ಥರಿಂದ ಪ್ರೀತಿಯ ಆತಿಥ್ಯ ಸಿಕ್ಕಿತ್ತು. ಮಾರನೇ ದಿನ ದೇಶಪಾಂಡೆ ಅವರ ಕುಮರಿ ಆಶ್ರಮದಲ್ಲಿ ಎಲ್ಲರಿಗೂ ವಸತಿ ವ್ಯವಸ್ಥೆ ಮಾಡಲಾಗಿತ್ತು.
ಗಾಂಧೀಜಿಗೆ ಚಪ್ಪಲಿ ಹೊಲಿದು ಕೊಟ್ಟಿದ್ದ ಕರೆಪ್ಪ:ಸಮಾವೇಶಕ್ಕೆ ಆಗಮಿಸುವಾಗ, ಹುದಲಿಯ ಹರಿಜನ ಕೇರಿ ಬಳಿ ಗಾಂಧೀಜಿ ಸ್ವಾಗತಕ್ಕೆ ಮಹಿಳೆಯರು ಆರತಿ ಹಿಡಿದುಕೊಂಡು ನಿಂತಿದ್ದರು. ಈ ವೇಳೆ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಕರೆಪ್ಪ ಹರಿಜನ ಎಂಬ ಎತ್ತರದ ವ್ಯಕ್ತಿ ಖಾದಿ ಬಟ್ಟೆ ಧರಿಸಿ ನಿಂತಿದ್ದರು. ಅವರನ್ನು ಗಾಂಧಿ ಅವರಿಗೆ ದೇಶಪಾಂಡೆ ಪರಿಚಯಿಸಿ, ಈತ ಅಹಿಂಸಾತ್ಮಕವಾಗಿ ಚಪ್ಪಲಿ ತಯಾರಿಸುತ್ತಾರೆ ಎಂದರು. ಆಗ ಗಾಂಧೀಜಿ ನನಗೂ ಒಂದು ಜೋಡಿ ಚಪ್ಪಲಿ ಹೊಲಿದು ಕೊಡುವಂತೆ ಹಾಸ್ಯಚಟಾಕಿ ಹಾರಿಸಿದರು. ಇದಾದ ಎರಡು ದಿನಗಳಲ್ಲಿ ಕರೆಪ್ಪ ಹೊಸ ಚಪ್ಪಲಿಗಳನ್ನು ಗಾಂಧೀಜಿ ಅವರಿಗೆ ಕೊಟ್ಟು ಸಂಭ್ರಮಿಸಿದ್ದರು. ಅವುಗಳನ್ನು ಊರು ತುಂಬಾ ಮೆರವಣಿಗೆ ಮಾಡಿ, ಕಾರ್ಯಕ್ರಮದ ವೇದಿಕೆ ಮೇಲೆ ಪ್ರದರ್ಶನಕ್ಕೆ ಇಡುವ ಮೂಲಕ ಸರಳತೆ ಮೆರೆದ ಗಾಂಧೀಜಿ, ಹಿಂದಿರುಗುವಾಗ ಅವುಗಳನ್ನು ತಮ್ಮೊಟ್ಟಿಗೆ ಒಯ್ದಿದ್ದರು ಎಂದು ಗ್ರಾಮದ ಹಿರಿಯರಾದ ಸಿ.ಬಿ.ಮೋದಗಿ ಈಟಿವಿ ಭಾರತಕ್ಕೆ ತಿಳಿಸಿದರು.
ಹುದಲಿಯಲ್ಲಿ ರಾಷ್ಟ್ರೀಯ ವಿವಾಹ ಪದ್ಧತಿಗೆ ಗಾಂಧೀಜಿ ಚಾಲನೆ:ದುಂದುವೆಚ್ಛದ ಮದುವೆಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಮಹಾತ್ಮಾ ಗಾಂಧೀಜಿ ಅವರು ರಾಷ್ಟ್ರೀಯ ಲಗ್ನಕ್ಕೆ ಹುದಲಿಯಲ್ಲೇ ಚಾಲನೆ ನೀಡಿದರು. ಕುಮರಿ ಆಶ್ರಮದಲ್ಲೆ ಅವರ ಮೊಮ್ಮಗ ಮನು ಗಾಂಧಿ ಮತ್ತು ನಿರ್ಮಲಾ ದೇಸಾಯಿ ಅವರ ಮದುವೆ ಸರಳವಾಗಿ ಮಾಡಿಸಿದ್ದರು. ವಧು-ವರ ಖಾದಿ ಬಟ್ಟೆ ತೊಟ್ಟು, ರಾಷ್ಟ್ರಧ್ವಜ ಹಾರಿಸಿದರೆ ಮದುವೆ ಆದಂತೆ. ಹುದಲಿ ತರುಣ ಸಂಘ ಈ ಪರಂಪರೆ ಮುಂದುವರಿಸಿಕೊಂಡು ಬಂದಿದೆ ಎಂಬುದು ಸಿ.ಬಿ.ಮೋದಗಿ ಅವರ ಅಭಿಮತ.
ಗಾಂಧೀಜಿ ಕಟಿಂಗ್ ಮಾಡಿದ್ದ ಸುಲಧಾಳ ಕ್ಷೌರಿಕ: ಸುಲಧಾಳದ ಮಲ್ಲಪ್ಪ ಹಡಪದ ಗಾಂಧೀಜಿ ಅವರಿಗೆ ಕ್ಷೌರ ಮಾಡಿದ್ದರು. ಈ ವೇಳೆ ಮಲ್ಲಪ್ಪ ಅವರಿಗೆ ಖಾದಿ ಧೋತರ, ಅಂಗಿಯನ್ನು ತೊಡಿಸಲಾಗಿತ್ತು. ಆದರೆ, ಅವರು ಧರಿಸಿದ್ದ ಬಟ್ಟೆಯ ಅಳತೆಗೂ ಮತ್ತು ಶರೀರಕ್ಕೂ ವ್ಯತ್ಯಾಸವಿತ್ತು. ಇದು ಗಾಂಧೀಜಿ ಗಮನಕ್ಕೂ ಬಂತು. ಆಗ ಕ್ಷೌರಿಕ, ‘ನಿಮ್ಮನ್ನು ಸೆಳೆಯುವುದಕ್ಕಾಗಿ ಪುಂಡಲಿಕ ಖಾತಗಡೆ ಬಟ್ಟೆ ಧರಿಸಿದ್ದೇನೆ’ ಎಂದು ಒಪ್ಪಿಕೊಂಡರು. ಇದರಿಂದ ಸಂತಸಗೊಂಡ ಗಾಂಧಿ, ‘ನೀವೂ ಇನ್ಮುಂದೆ ಖಾದಿ ಧರಿಸುವಂತೆ ಸಲಹೆ ಕೊಟ್ಟಿದ್ದರು.
93 ವರ್ಷದ ಮಾಜಿ ಪೈಲ್ವಾನ್ ಸೋಮಲಿಂಗಪ್ಪ ಭೀಮಪ್ಪ ಮಳಗಲಿ ಅವರು ಮಾತನಾಡಿ, ಗಾಂಧೀಜಿ ಪಾದಸ್ಪರ್ಶದಿಂದ ಹುದಲಿ ಗ್ರಾಮ ಪುನೀತವಾಗಿದೆ. ಇದು ನಮಗೆ ಹೆಮ್ಮೆ ಮತ್ತು ಅಭಿಮಾನದ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ:ವಂದೇ ಭಾರತ್ ರೈಲು ಸ್ವಚ್ಛತೆಗೆ '14 ನಿಮಿಷಗಳ ಪವಾಡ'... ಹೊಸ ವಿಧಾನ ಪರಿಚಯಿಸಲಿರುವ ಮೈಸೂರು ನೈಋತ್ಯ ರೈಲ್ವೆ