ಕರ್ನಾಟಕ

karnataka

ETV Bharat / state

ಗಾಂಧೀಜಿ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯೋಣ: ಶಾಸಕ ಆಸೀಫ್ ಸೇಠ್ - ಡಿಸಿಪಿ ರೋಹನ್ ಜಗದೀಶ

ಟಿಳಕವಾಡಿಯ ವೀರಸೌಧದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮ ನಡೆಯಿತು.

ಟಿಳಕವಾಡಿಯ ವೀರಸೌಧದಲ್ಲಿ ನಡೆದ ಮಹಾತ್ಮ ಗಾಂಧೀಜಿ ಜಯಂತಿ
ಟಿಳಕವಾಡಿಯ ವೀರಸೌಧದಲ್ಲಿ ನಡೆದ ಮಹಾತ್ಮ ಗಾಂಧೀಜಿ ಜಯಂತಿ

By ETV Bharat Karnataka Team

Published : Oct 2, 2023, 3:29 PM IST

Updated : Oct 2, 2023, 5:09 PM IST

ಟಿಳಕವಾಡಿಯ ವೀರಸೌಧದಲ್ಲಿ ನಡೆದ ಮಹಾತ್ಮ ಗಾಂಧಿ ಜಯಂತಿ

ಬೆಳಗಾವಿ :ಜಗತ್ತಿಗೆ ಸತ್ಯ, ಶಾಂತಿ ಮತ್ತು ಅಹಿಂಸೆಯ ಸಂದೇಶಗಳನ್ನು ಬೋಧಿಸಿದ ಮಹಾತ್ಮ ಗಾಂಧೀಜಿಯವರ ಮಾರ್ಗವೇ ಸರಿಯಾದ ಮಾರ್ಗ. ಭಾರತೀಯರಾದ ನಾವು ಪರಸ್ಪರ ಗೌರವಿಸುವ ಮೂಲಕ ಸದಾ ಭಾರತೀಯರಾಗುವ ಜತೆಗೆ ಗಾಂಧೀಜಿ ಹಾಕಿಕೊಟ್ಟ ಮಾರ್ಗದಲ್ಲಿಯೇ ನಡೆಯಬೇಕು ಎಂದು ಶಾಸಕ ಆಸೀಫ್ ಸೇಠ್ ಕರೆ ಕೊಟ್ಟರು.

ಇಂದಿನ ಯುವಪೀಳಿಗೆ ಗಾಂಧೀಜಿ ತತ್ವಗಳನ್ನು ಸ್ವೀಕರಿಸಬೇಕು. ಅವರ ಪುಸ್ತಕಗಳನ್ನು ಓದಿ ವಿಚಾರ, ಚಿಂತನೆಗಳನ್ನು ತಿಳಿದುಕೊಳ್ಳಬೇಕು. ಭವಿಷ್ಯದಲ್ಲಿ ಮಾದರಿ ವ್ಯಕ್ತಿಗಳಾಗಲು ಕಠಿಣ ಶ್ರಮವಹಿಸಿ, ನಿರಂತರ ಅಭ್ಯಾಸ ಮಾಡಿದರೆ ಮಾತ್ರ ಪ್ರಯತ್ನದ ಪ್ರತಿಫಲ ಸಿಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇಂದು ದೇಶ ಕಂಡ ಮಹಾನ್ ನಾಯಕ, ಸರಳ ಜೀವಿ, ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನವೂ ಹೌದು. "ಜೈ ಜವಾನ್-ಜೈ ಕಿಸಾನ್" ಘೋಷಣೆ ಮೊಳಗಿಸಿದ ಅವರ ಸರಳ ಜೀವನ ನಿರ್ವಹಣೆಯನ್ನು ನಾವೆಲ್ಲರೂ ಪಾಠವಾಗಿ ಕಲಿಯಬೇಕು ಎಂದರು.

ಮನುಷ್ಯ ಕುಲಕ್ಕೆ ಶಾಂತಿ, ಸಹಬಾಳ್ವೆ ತೋರಿಸಿಕೊಟ್ಟವರು ಗಾಂಧೀಜಿ. ಅಹಿಂಸಾ ತತ್ವ, ವಿಚಾರ, ಸರಳತೆ ನಡೆ ಇಡೀ ಪ್ರಪಂಚ ಮೆಚ್ಚುವಂಥದ್ದು. ಗಾಂಧೀಜಿಯವರ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ನಾವೆಲ್ಲರೂ ತಿಳಿದುಕೊಳ್ಳಬೇಕು. ಗಾಂಧಿ ತತ್ವಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಅವರ ಆಶಯದಂತೆ ರಾಮರಾಜ್ಯ ಕಟ್ಟಲು ಸಾಧ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ ತಿಳಿಸಿದರು.

ಇದಕ್ಕೂ ಮುನ್ನ ವಿಶೇಷ ಉಪನ್ಯಾಸ ನೀಡಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರೊ.ಗಂಗಾಧರಯ್ಯ, ಗಾಂಧೀಜಿಯವರು ತಮ್ಮ ಅಹಿಂಸಾ ತತ್ವದ ಮೂಲಕ ಬ್ರಿಟಿಷರ ವಿರುದ್ಧ ಹೋರಾಡಿದರು. ದೇಶಕ್ಕೆ ರಾಮರಾಜ್ಯದ ಕಲ್ಪನೆಯನ್ನು ಬಿತ್ತುವ ಕಾರ್ಯಕ್ಕೆ ಮುಂದಾದರು. ಅವರ ಸಾಮಾಜಿಕ, ಧಾರ್ಮಿಕ ನೀತಿಗಳು, ಗಾಂಧಿ ತತ್ವ ಅನೇಕ ದೇಶಗಳಿಗೆ ಮಾದರಿಯಾಗಿವೆ.‌ ವಿದ್ಯಾರ್ಥಿಗಳು ಶಾಂತಿದೂತ ಗಾಂಧೀಜಿಯವರ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಗುರಿ ಸಾಧನೆಗೆ ಏಕಾಗ್ರತೆ ಹೆಚ್ಚಿಸಲು ಅವರ ತತ್ವಗಳನ್ನು ನಾವೆಲ್ಲರೂ ಪಾಲಿಸಬೇಕೆಂದರು.

ಗಾಂಧೀಜಿ ಪ್ರಬಂಧ ಸ್ಪರ್ಧೆ-ವಿಜೇತರಿಗೆ ಬಹುಮಾನ: ಪ್ರೌಢಶಾಲಾ ವಿಭಾಗದಲ್ಲಿ ಖಾನಾಪುರ ತಾಲೂಕಿನ ಲಿಂಗನಮಠ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸುಪ್ರೀತಾ ಪಿ. ಮೀಟಗಾರ ಪ್ರಥಮ, ಮೂಡಲಗಿ ತಾಲೂಕು ಕಲ್ಲೋಳ್ಳಿ ಪಿ.ಜೆ.ಎನ್ ಹೈಸ್ಕೂಲ್ ವಿದ್ಯಾರ್ಥಿ ಲಕ್ಷ್ಮೀ ಬ. ಪಾಗಾದ ದ್ವಿತೀಯ ಹಾಗೂ ಯರಗಟ್ಟಿ ತಾಲೂಕಿನ ಮುಗಳಿಹಾಳ ಸರ್ಕಾರಿ ಪ್ರೌಢ ಶಾಲೆಯ ಸುಧಾ ಚಂದರಗಿ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಲಾಯಿತು.

ಪದವಿಪೂರ್ವ ವಿಭಾಗದಲ್ಲಿ ಬೈಲಹೊಂಗಲ ಎಸ್.ಜಿ.ವಿ ಪಿಯು ಕಾಲೇಜು ವಿದ್ಯಾರ್ಥಿ ಆರತಿ ತಡಕೋಡ ಪ್ರಥಮ ಸ್ಥಾನ, ಇಟಗಿ ಪಿಯು ಕಾಲೇಜಿನ ಲಕ್ಷ್ಮೀ ಬಡಿಗೇರ ದ್ವಿತೀಯ ಸ್ಥಾನ ಹಾಗೂ ಚನ್ನಮನ ಕಿತ್ತೂರು ಆರ್.ಜಿ.ಎಸ್ ಪಿಯು ಕಾಲೇಜು ವಿದ್ಯಾರ್ಥಿ ಸೋನು ಗುಂಡಗಿ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪ್ರಮಾಣ ಪತ್ರ ವಿತರಿಸಲಾಯಿತು.

ಪದವಿ/ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಬೈಲಹೊಂಗಲ ಕಿತ್ತೂರು ರಾಣಿ ಚನ್ನಮ್ಮ ಶಿಕ್ಷಣ ಮಹಾವಿದ್ಯಾಲಯದ (ಬಿ.ಇಡಿ) ಅಶ್ವಿನಿ ಸಂಗೊಳ್ಳಿ ಪ್ರಥಮ ಸ್ಥಾನ, ಅದೇ ಕಾಲೇಜಿನ ಸಮರೀನ್ ಯಾಕೋಶಿ ದ್ವಿತೀಯ ಸ್ಥಾನ ಹಾಗೂ ಬೆಳಗಾವಿಯ ಬಾವುರಾವ್ ಕಾಕತಕರ (ಬಿ.ಕೆ) ಕಾಲೇಜು ವಿದ್ಯಾರ್ಥಿ ಸಂಧ್ಯಾ ಕೋಲಕಾರ ತೃತೀಯ ಸ್ಥಾನ ಗಳಿಸಿದ್ದು, ಬಹುಮಾನ, ಪ್ರಮಾಣ ಪತ್ರ ವಿತರಿಸಲಾಯಿತು.

ಗಾಂಧಿಪ್ರಿಯ ಭಜನ್ ಕಾರ್ಯಕ್ರಮ:ವಿನಾಯಕ ಮೊರೆ ಹಾಗೂ ತಂಡದವರು ಮತ್ತು ಭಾರತೀಯ ಸೇವಾ ದಳ, ಶಾಲಾ ಮಕ್ಕಳು ಗಾಂಧೀಪ್ರಿಯ ಭಜನೆಗಳನ್ನು ಪ್ರಸ್ತುತಪಡಿಸಿದರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ರಾಜೇಂದ್ರ ಕಲಘಟಗಿ ಮತ್ತಿತರರನ್ನು ಗಣ್ಯರು ಸನ್ಮಾನಿಸಿ, ಗೌರವಿಸಿದರು.

ಸ್ವಾತಂತ್ರ್ಯ ಹೋರಾಟಗಾರರಾದ ರಾಜೇಂದ್ರ ಕಲಘಟಗಿ, ಜಿ.ಪಂ.ಸಿಇಒ ಹರ್ಷಲ್ ಭೂಯರ್, ಉಪ ಮೇಯರ್ ರೇಷ್ಮಾ ಪಾಟೀಲ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಡಿಸಿಪಿ ರೋಹನ್ ಜಗದೀಶ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಗುರುನಾಥ ಕಡಬೂರ, ಪಾಲಿಕೆ ಉಪ ಆಯುಕ್ತೆ ಭಾಗ್ಯಶ್ರೀ ಹುಗ್ಗಿ, ಅಧೀಕ್ಷಕ ಎಂಜಿನಿಯರ್ ಲಕ್ಷ್ಮೀ ನಿಪ್ಪಾಣಿಕರ ಹಾಗೂ ಮಹಾನಗರ ಪಾಲಿಕೆಯ ಸದಸ್ಯರು, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ವಾತಂತ್ರ್ಯ ಹೋರಾಟಗಾರರ ಸಂಘಟನೆಯ ಪದಾಧಿಕಾರಿಗಳು, ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ:ಗಾಂಧಿ ಅವಹೇಳನಕ್ಕೆ ಅವಕಾಶ ನೀಡಲ್ಲ, ಅವಹೇಳನ ಮಾಡಿದಲ್ಲಿ ಕ್ರಮ: ಸಿದ್ದರಾಮಯ್ಯ ಎಚ್ಚರಿಕೆ..!

Last Updated : Oct 2, 2023, 5:09 PM IST

ABOUT THE AUTHOR

...view details