ಕರ್ನಾಟಕ

karnataka

ETV Bharat / state

ಬೆಳಗಾವಿ: ರುದ್ರಾಕ್ಷಿ ಗಣಪ ನಿರ್ಮಿಸಿ ಪರಿಸರ ಜಾಗೃತಿ ಸಂದೇಶ - ಹಳೆ ಗಾಂಧಿ ನಗರದ ಕಲಾವಿದ ಸುನೀಲ ಸಿದ್ದಪ್ಪ ಆನಂದಾಚೆ

ಬೆಳಗಾವಿಯಲ್ಲಿ ಕಲಾವಿದರೊಬ್ಬರು ಪ್ರತಿ ವರ್ಷವೂ ಪರಿಸರಸ್ನೇಹಿ ಗಣಪತಿ ಮೂರ್ತಿ ತಯಾರಿಸುತ್ತಿದ್ದಾರೆ. ಈ ಸಲ 1 ಲಕ್ಷ ರೂಪಾಯಿ ವ್ಯಯಿಸಿ 34,395 ರುದ್ರಾಕ್ಷಿಗಳೊಂದಿಗೆ ಮೋಹಕ ವಿಗ್ರಹ ತಯಾರಿಸಿ ಗಮನ ಸೆಳೆದಿದ್ದಾರೆ.

ರುದ್ರಾಕ್ಷಿ ಗಣಪ
ರುದ್ರಾಕ್ಷಿ ಗಣಪ

By ETV Bharat Karnataka Team

Published : Sep 17, 2023, 10:47 AM IST

Updated : Sep 17, 2023, 1:07 PM IST

ರುದ್ರಾಕ್ಷಿ ಗಣಪ

ಬೆಳಗಾವಿ:ಅದ್ಧೂರಿಯಾಗಿಗಣೇಶೋತ್ಸವ ಆಚರಿಸಲು ಬೆಳಗಾವಿ ಜಿಲ್ಲೆ ಸಜ್ಜಾಗುತ್ತಿದೆ.‌ ರುದ್ರಾಕ್ಷಿಗಳಿಂದಲೇ ತಯಾರಿಸಿರುವ ಸುಂದರ ಗಣಪನ ಮೂರ್ತಿ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ವಿಶೇಷ ಮೂರ್ತಿಯಲ್ಲಿ ಕಲಾವಿದನ ಕೈಚಳಕವನ್ನು ನೋಡಬಹುದು. ಸಂಪೂರ್ಣವಾಗಿ ರುದ್ರಾಕ್ಷಿಗಳಿಂದಲೇ ಕಂಗೊಳಿಸುತ್ತಿರುವ ಗಣೇಶನನ್ನು ಹಳೆ ಗಾಂಧಿ ನಗರದ ಕಲಾವಿದ ಸುನೀಲ ಸಿದ್ದಪ್ಪ ಆನಂದಾಚೆ ಸಿದ್ಧಪಡಿಸಿದ್ದಾರೆ. ತಮ್ಮ ತಂದೆ ಸಿದ್ದಪ್ಪ ಅವರಿಂದ ಬಳುವಳಿಯಾಗಿ ಪಡೆದಿರುವ ಮೂರ್ತಿ ರಚನೆ ಕಲೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ವೃತ್ತಿಯಲ್ಲಿ ಪ್ಲಂಬರ್​ ಆಗಿರುವ ಸುನೀಲ ಪ್ರವೃತ್ತಿಯಲ್ಲಿ ಪರಿಸರಸ್ನೇಹಿ‌ ಗಣೇಶ ಮೂರ್ತಿ ಸಿದ್ಧಪಡಿಸುತ್ತಾರೆ.

ಸುನೀಲ ಅವರ ಬಳಿಯಿಂದ ಅನೇಕ ವರ್ಷಗಳಿಂದ ಮೂರ್ತಿಯನ್ನು ನಾನಾವಾಡಿಯ ಗಣೇಶೋತ್ಸವ ಮಂಡಳಿಯವರು ಕೊಂಡೊಯ್ಯುತ್ತಿದ್ದಾರೆ. ಪರಿಸರಕ್ಕೆ ಮಾರಕವಾಗದ ವಿಶಿಷ್ಟ ಗಣಪತಿಯನ್ನೇ ಸುನೀಲ ಅವರ ಬಳಿ ಅವರು ಮಾಡಿಸುತ್ತಿದ್ದಾರೆ. ಈ ಹಿಂದೆ ವಾಲ್ ನಟ್, ಮೋದಕ, ಬಟ್ಟೆಯ ಹೂವು, ಯೂಸ್ ಆಂಡ್ ಥ್ರೋ ಪೇಪರ್ ಕಪ್, ಮರಳು, ಡ್ರೈ ಫ್ರೂಟ್ಸ್, ವಿವಿಧ ಧಾನ್ಯಗಳಿಂದ ತಯಾರಿಸಿದ್ದ ಗಣೇಶ ಮೂರ್ತಿಗಳನ್ನು ಮಾಡಿಸಿದ್ದರು. ಈ ಬಾರಿ ರುದ್ರಾಕ್ಷಿ ಗಣಪನ ಪ್ರತಿಷ್ಠಾಪಿಸಲು ತೀರ್ಮಾನಿಸಿದ್ದಾರೆ.

34,395 ರುದ್ರಾಕ್ಷಿ ಬಳಕೆ:12 ಅಡಿ ಎತ್ತರದ ಕುಳಿತ ಭಂಗಿಯ ಗಣೇಶ ಮೂರ್ತಿ ತಯಾರಿಸಲು‌ ಸುನೀಲ ಆನಂದಾಚೆ 34,395 ರುದ್ರಾಕ್ಷಿ ಬಳಸಿದ್ದಾರೆ. ಈ ರುದ್ರಾಕ್ಷಿಗಳನ್ನು ಮಹಾರಾಷ್ಟ್ರದ ನಾಸಿಕ್‌ನಿಂದ ತರಿಸಿಕೊಂಡು ಬಂದಿದ್ದಾರೆ. ಮೂರ್ತಿ ಮೇಲ್ಭಾಗಕ್ಕೆ ರುದ್ರಾಕ್ಷಿ ಬಳಸಿದರೆ ಒಳಗೆ ರಟ್ಟು, ಬಿದಿರು ಹಾಗೂ ಸುತಳಿ ಚೀಲಗಳನ್ನು ಉಪಯೋಗಿಸಿದ್ದಾರೆ. ಈವರೆಗೆ ಮೂರ್ತಿ ತಯಾರಿಸಲು 1 ಲಕ್ಷ ರೂ. ಖರ್ಚಾಗಿದೆ‌ ಎಂದು ಅವರು ಮಾಹಿತಿ ನೀಡಿದ್ದಾರೆ. ಸುನೀಲರಿಗೆ ಪತ್ನಿ ರಶ್ಮಿ, ಮಕ್ಕಳಾದ ಸಮರ್ಥ ಮತ್ತು ಯಶ್ ಸಾಥ್ ಕೊಟ್ಟಿದ್ದಾರೆ. ಸತತ ಎರಡು ತಿಂಗಳು ಈ ಗಣಪತಿ ತಯಾರಿಸಲು ಕುಟುಂಬ ಶ್ರಮಿಸಿದೆ.

ಈಟಿವಿ ಭಾರತ್​ ಜೊತೆಗೆ ಮಾತನಾಡಿದ ಕಲಾವಿದ ಸುನೀಲ, "ನಾನಾವಾಡಿಯ ಗಣೇಶ ಮಂಡಳಿಯವರು ಹೇಳಿದಂತೆ ಪ್ರತಿ ವರ್ಷವೂ ಪರಿಸರಸ್ನೇಹಿ ಗಣೇಶ ಮೂರ್ತಿ ಮಾಡಿ ಕೊಡುತ್ತಿದ್ದೇನೆ. ಈ ಸಲ ರುದ್ರಾಕ್ಷಿಯಿಂದ ತಯಾರಿಸಲಾಗಿದೆ. ಪ್ಲಂಬಿಂಗ್ ಕೆಲಸದ ಒತ್ತಡದ ನಡುವೆಯೂ ತಂದೆ ಕಲಿಸಿದ ಕಾಯಕ ಮರೆತಿಲ್ಲ. ಬಿಡುವು ಮಾಡಿಕೊಂಡು ವರ್ಷಕ್ಕೆ ಒಂದೇ ಗಣಪತಿ ಮಾಡುತ್ತಿದ್ದೇನೆ. ದೇವರ ಸೇವೆ ಮಾಡಿದ ಸಂತೃಪ್ತಿ ನನಗಿದೆ" ಎಂದರು.

ಗಣೇಶೋತ್ಸವ ಮಂಡಳಿಯ ಸಿದ್ದಾರ್ಥ ಮೋಹನ ಪಾಟೀಲ ಮಾತನಾಡಿ, "ಪರಿಸರಕ್ಕೆ ಹಾನಿ ಮಾಡುವ ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವುದು ಸರಿಯಲ್ಲ. ಅನೇಕ ವರ್ಷಗಳಿಂದ ನಮ್ಮ ಮಂಡಳಿಯಿಂದ ಪರಿಸರಸ್ನೇಹಿ ಗಣಪನನ್ನೇ ಕೂರಿಸುತ್ತೇವೆ. ನಮ್ಮ ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರ ಬಿಟ್ಟು ಹೋಗುವುದು ನಮ್ಮ ಜವಾಬ್ದಾರಿ. ಆದ್ದರಿಂದ ಎಲ್ಲರೂ ಈ ನಿಟ್ಟಿನಲ್ಲಿ ಯೋಚಿಸಬೇಕು" ಎಂದು ಕೇಳಿಕೊಂಡರು.

ಇದನ್ನೂ ಓದಿ:40 ಮೂರ್ತಿಗಳಿಂದ ಶುರುವಾದ ಕಸುಬು...ಈಗ 3 ಲಕ್ಷ ಮೂರ್ತಿಗಳ ತಯಾರಿಕೆ ವರಿಗೂ ಸಾಗಿದ ಕಾಯಕ.. ಇದು ಕುಂಬಾರ ಕುಟುಂಬದ ಯಶೋಗಾಥೆ!

Last Updated : Sep 17, 2023, 1:07 PM IST

ABOUT THE AUTHOR

...view details