ಚಿಕ್ಕೋಡಿ:ರಾಯಬಾಗ ತಾಲೂಕು ಕುಡಚಿ ಪಟ್ಟಣದ ಕಾರ್ಮಿಕನೋರ್ವನ ಮಗ ಇಂದು ಯುಪಿಎಸ್ಸಿ ಪರೀಕ್ಷೆಯಲ್ಲಿ 663ನೇ ಱಂಕ್ ಪಡೆದು ಸಾಧನೆ ಮಾಡಿದ್ದಾರೆ.
ಕುಡಚಿ ಪಟ್ಟಣದ ಗಜಾನನ ಬಾಲೆ ಎಂಬ 28 ವರ್ಷದ ಯುವಕ ಯುಪಿಎಸ್ಸಿ ಪರೀಕ್ಷೆಯಲ್ಲಿ 663ನೇ ಱಂಕ್ ಪಡೆದಿದ್ದಾರೆ. ಇವರ ತಂದೆ ಶಂಕರ ಬಾಲೆ ಅವರು ಉಗಾರ ಶುಗರ್ ಕಾರ್ಖಾನೆಯಲ್ಲಿ ಇಲೆಕ್ಟ್ರಿಕಲ್ ಕಾರ್ಮಿಕರಾಗಿದ್ದಾರೆ. ತಾಯಿ ಸುಜಾತಾ ಬಾಲೆ ಗೃಹಿಣಿ ಆಗಿದ್ದು, ಇವರ ಹಿರಿಯ ಮಗ ಗಜಾನನ ಬಾಲೆ ಯುಪಿಎಸ್ಸಿ ಪಾಸ್ ಮಾಡಿದ್ದು, ಜಿಲ್ಲೆ ಹಾಗೂ ರಾಜ್ಯದ ಕೀರ್ತಿ ಹೆಚ್ಚಿಸಿದ್ದಾರೆ.
ಗಜಾನನ ಬಾಲೆ ಅವರು ಬಡ ಕುಟುಂಬದಲ್ಲಿ ಜನಿಸಿದ್ದು, ತಮ್ಮ ಎಸ್ಎಸ್ಎಲ್‌ಸಿ ವಿದ್ಯಾಭ್ಯಾಸವನ್ನು ಉಗಾರ ಪಟ್ಟಣದ ಶ್ರೀಹರಿ ವಿದ್ಯಾಲಯದಲ್ಲಿ ಪಡೆದಿದ್ದು, ಶೇ.93% ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದರು. ಪಿಯುಸಿಯಲ್ಲಿ ವಿದ್ಯಾಭ್ಯಾಸವನ್ನು ಧಾರವಾಡ ಜೆಎಸ್ಎಸ್ ನಲ್ಲಿ ಶೇ. 87 ಅಂಕಗಳೊಂದಿಗೆ ಉತ್ತೀರ್ಣರಾಗಿದ್ದರು. ಬಳಿಕ ಇಂಜನಿಯರಿಂಗ್ ವಿದ್ಯಾಭ್ಯಾಸವನ್ನು ಬೆಳಗಾವಿಯ ಜೆಐಟಿಯಲ್ಲಿ 77% ಅಂಕಗಳೊಂದಿಗೆ ಪೂರ್ಣಗೊಳಿಸಿದ್ದರು.
ಬೆಂಗಳೂರಿನಲ್ಲಿ ಗಜಾನನ ಐಎಎಸ್ ಕೋಚಿಂಗ್ ಸೇರ್ಪಡೆಗೊಂಡು ಅಧ್ಯಯನ ಪ್ರಾರಂಭಿಸಿದರು. ಈ ಹಿಂದೆ ನಾಲ್ಕು ಬಾರಿ ಯುಪಿಎಸ್‌ಸಿ ಪರೀಕ್ಷೆ ಎದುರಿಸಿದ್ದರು. 5ನೇ ಬಾರಿಗೆ ಯುಪಿಎಸ್ಸಿ ತೇರ್ಗಡೆಯಾಗುವ ಮೂಲಕ ಹೆತ್ತವರ ಕನಸನ್ನು ನನಸು ಮಾಡಿದ್ದಾರೆ.
ಈ ಕುರಿತು 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ದಿನಕ್ಕೆ 8 ರಿಂದ 10 ಗಂಟೆಗಳ ಕಾಲ ವಿದ್ಯಾಭ್ಯಾಸ ಮಾಡಿದ್ದು, ಸತತವಾಗಿ ಮೂರ್ನಾಲ್ಕು ವರ್ಷ ವಿದ್ಯಾಭ್ಯಾಸ ಮಾಡಿದ್ದರ ಪ್ರತಿಫಲವಾಗಿ ಇಂದು ಯುಪಿಎಸ್ಸಿ ಪಾಸ್ ಮಾಡಿರುವುದಾಗಿ ತಿಳಿಸಿದ್ದಾರೆ.