ಚಿಕ್ಕೋಡಿ:ಮಹಾರಾಷ್ಟ್ರದಲ್ಲಿ ಹಾಗೂ ಕರ್ನಾಟಕದಲ್ಲಿ ಮುಂದುವರೆದ ಭಾರಿ ಮಳೆ ಹಾಗೂ ಪ್ರವಾಹ ಸ್ಥಿತಿಯಿಂದಾಗಿ ತಾಲೂಕು ವ್ಯಾಪ್ತಿಯಲ್ಲಿ ಜನಜೀವನ ಸಂಪೂರ್ಣ ಅಸ್ಥವ್ಯಸ್ತಗೊಂಡಿದೆ. ಕೃಷ್ಣಾ ನದಿಗೆ ಮೂರು ಲಕ್ಷ ಹತ್ತು ಸಾವಿರ ಕ್ಯೂಸೆಕ್ನಷ್ಟು ನೀರು ಹರಿದು ಬರುತ್ತಿದ್ದು, ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗುವ ಸಾಧ್ಯತೆ ಇದೆ. ಕೃಷ್ಣಾ ನದಿ ನೀರಿನ ಮಟ್ಟ ಏರಿಕೆಯಾಗಿದ್ದು, ನದಿ ತೀರದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.
ರಾಯಬಾಗ ತಾಲೂಕಿನ ಸೌದತ್ತಿ ಗ್ರಾಮ ಹಾಗೂ ಗ್ರಾಮ ಪಂಚಾಯತಿ ಒಳಗೆ ನೀರು ನುಗ್ಗಿ ರಾತ್ರೋರಾತ್ರಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಜನರಲ್ಲಿ ಆತಂಕ ಹೆಚ್ಚಿದೆ. ತಾಲೂಕು ದಂಡಾಧಿಕಾರಿಗಳ ಕಚೇರಿಗಳಲ್ಲಿ ಸಹಾಯವಾಣಿ ನಂಬರ್ಗಳನ್ನು ಅಳವಡಿಸಲಾಗಿದ್ದು, ಸಾರ್ವಜನಿಕರು ಸಂಪರ್ಕಿಸಬಹುದಾಗಿದೆ. ಇನ್ನು ತಾಲೂಕು ಉಪ ವಿಭಾಗಾಧಿಕಾರಿಗಳ ವ್ಯಾಪ್ತಿಯಲ್ಲಿ 46 ಗ್ರಾಮಗಳಲ್ಲಿ ಜನ ಹಾಗೂ ಜಾನುವಾರುಗಳ ರಕ್ಷಣೆ ಮಾಡಲಾಗುತ್ತಿದ್ದು, ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕೆಲಸ ಭರದಿಂದ ಸಾಗಿದೆ.