ಅಥಣಿ:ಕೊರೊನಾ ಸೋಂಕಿಗೆ ಒಳಗಾಗಿ ಮೃತಪಟ್ಟವರ ಶವ ಸಂಸ್ಕಾರಕ್ಕೂ ಕೆಲ ಕುಟುಂಬ ವರ್ಗದವರು ಮುಂದೆ ಬರಲು ಯೋಚಿಸುವಂತಹ ಈ ಕರಾಳ ದಿನಗಳಲ್ಲಿ ಅಥಣಿಯಲ್ಲಿ ಗೆಳೆಯರ ಬಳಗವೊಂದು ಉಚಿತವಾಗಿ ಶವ ಸಂಸ್ಕಾರ ನಿರ್ವಹಿಸುತ್ತಿದ್ದು, ಸಮಾಜಕ್ಕೆ ಮಾದರಿಯಾಗಿದೆ.
ಅಥಣಿಯಲ್ಲಿ 'ಅಥಣಿ ಗೆಳೆಯರ ಬಳಗ' ಎಂಬ ಹೆಸರನ್ನಿಟ್ಟುಕೊಂಡು, ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಉಚಿತವಾಗಿ ನೆರವೇರಿಸುತ್ತಿದ್ದಾರೆ. ಹೌದು, ಇಂತಹ ಒಂದು ತಂಡ ಕಳೆದ 15 ದಿನಗಳಿಂದ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ನಡೆಸುತ್ತಿದೆ.
ಈಗಾಗಲೇ ತಾಲೂಕಿನ ಹಲವು ಕಡೆಗಳಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಸಾವಿರಾರು ರೂಪಾಯಿ ಹಣ ಪಡೆದ ಸಾಕಷ್ಟು ಉದಾಹರಣೆಗಳಿವೆ. ಅತ್ಯಂತ ಅಮಾನವೀಯವಾಗಿ ಕೆಲವರ ಅಂತ್ಯ ಸಂಸ್ಕಾರ ನೆರವೇರಿಸಿದ ಉದಾಹರಣೆಗಳು ಸಹ ನಮ್ಮ ಕಣ್ಣ ಮುಂದಿವೆ. ಇಂತಹ ಹಲವು ಘಟನೆಗಳನ್ನು ನೋಡಿದ್ದ ಈ ಅಥಣಿ ಗೆಳೆಯರ ಬಳಗ ಸದ್ಯ ಉಚಿತವಾಗಿ ಶವ ಸಂಸ್ಕಾರ ಮಾಡಿಕೊಡುತ್ತಿದೆ.
ಸುಮಾರು 12 ಜನ ಸೇರಿಕೊಂಡು ಕಳೆದ 15 ದಿನಗಳಿಂದ ಕೋವಿಡ್‌ನಿಂದ ಮೃತಪಟ್ಟ 20ಕ್ಕೂ ಹೆಚ್ಚು ಜನರ ಅಂತ್ಯ ಸಂಸ್ಕಾರ ನೆರವೇರಿಸಿಕೊಟ್ಟಿದ್ದಾರೆ. ಯಾರಿಂದಲೂ ನಯಾ ಪೈಸೆಯನ್ನು ಅಪೇಕ್ಷಿಸದೆ ತಮ್ಮ ಸ್ವಂತ ಖರ್ಚಿನಿಂದಲೇ ಸಾಧ್ಯವಾದಷ್ಟು ವಿಧಿ ವಿಧಾನಕ್ಕೆ ಬೇಕಾದ ವೆಚ್ಚಗಳನ್ನು ಭರಿಸುತ್ತಿದ್ದಾರೆ.