ಬೆಳಗಾವಿ/ಬೆಂಗಳೂರು:ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಶೇಕಡಾ 83.89ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನಾಲ್ವರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಕಚೇರಿಯಲ್ಲಿಂದು ಮಂಡಳಿಯ ಅಧ್ಯಕ್ಷ ರಾಮನಾಥನ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೀಶ್ ಸಿಂಗ್ ಅವರು ಮಾಧ್ಯಮಗೋಷ್ಠಿ ನಡೆಸಿ ಫಲಿತಾಂಶದ ಬಗ್ಗೆ ಮಾಹಿತಿ ನೀಡಿದರು.
ಬೆಂಗಳೂರಿನ ನ್ಯೂ ಮೆಕಾಲ ಇಂಗ್ಲಿಷ್ ಸ್ಕೂಲ್ನ ವಿದ್ಯಾರ್ಥಿನಿ ಭೂಮಿಕಾ ಪೈ, ಚಿಕ್ಕಬಳ್ಳಾಪುರದ ಬಾಲಗಂಗಾಧರನಾಥ ಹೈಸ್ಕೂಲ್ನ ವಿದ್ಯಾರ್ಥಿ ಯಶಸ್ ಗೌಡ, ಬೆಳಗಾವಿ ಜಿಲ್ಲೆಯ ಸವದತ್ತಿಯ ಕುಮಾರೇಶ್ವರ ಶಾಲೆಯ ವಿದ್ಯಾರ್ಥಿನಿ ಅನುಪಮಾ ಶ್ರೀಶೈಲ ಹಾಗೂ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಆಕ್ಸ್ಫರ್ಡ್ ಇಂಗ್ಲಿಷ್ ಶಾಲೆಯ ವಿದ್ಯಾರ್ಥಿ ಭೀಮನಗೌಡ ಹನುಮಂತಗೌಡ ಪಾಟೀಲ್ 625ಕ್ಕೆ 625 ಅಂಕ ಗಳಿಸಿದ್ದಾರೆ.
ಈಟಿವಿ ಭಾರತ ಜೊತೆ ಮಾತನಾಡಿದ ವಿದ್ಯಾರ್ಥಿನಿ ಅನುಪಮಾ, ''ಶೈಕ್ಷಣಿಕ ವರ್ಷದ ಆರಂಭದಿಂದಲೇ ಪರೀಕ್ಷೆಗೆ ತಯಾರಿ ನಡೆಸಿದ್ದೆ. ನಿತ್ಯ ಬೆಳಗ್ಗೆ ಶಾಲೆಗೆ ಹೋಗುವ ಮುನ್ನ ಎರಡು ತಾಸು ಓದುತ್ತಿದ್ದೆ. ಶಾಲೆಯಿಂದ ಮನೆಗೆ ಮರಳಿದ ನಂತರವೂ ರಾತ್ರಿ 12 ಗಂಟೆವರೆಗೆ ವಿದ್ಯಾಭ್ಯಾಸ ಮಾಡುತ್ತಿದ್ದೆ. ನನ್ನ ನಿರೀಕ್ಷೆಯಂತೆ ಮೊದಲ ಸ್ಥಾನ ಸಿಕ್ಕಿರುವುದು ಬಹಳಷ್ಟು ಖುಷಿ ತಂದಿದೆ'' ಎಂದರು.
''ಮುಂದೆ ಪಿಯು ವಿಜ್ಞಾನ ವಿಭಾಗಕ್ಕೆ ಪ್ರವೇಶ ಪಡೆದು, ಅದರೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತೇನೆ. ಐಎಎಸ್ ಅಧಿಕಾರಿಯಾಗುವ ಗುರಿ ಇಟ್ಟುಕೊಂಡಿದ್ದೇನೆ'' ಎಂದು ವಿದ್ಯಾರ್ಥಿನಿ ಅನುಪಮಾ ತಿಳಿಸಿದ್ದಾರೆ. ಶ್ರೀ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಅನುಪಮಾ ಅವರ ತಂದೆ ಕಳೆದ ವರ್ಷವಷ್ಟೇ ನಿಧನರಾಗಿದ್ದಾರೆ. ತಾಯಿ ರಾಜಶ್ರೀ ಸವದತ್ತಿಯ ಎಂ.ಎಂ.ಜೋಶಿ ಕಣ್ಣಿನ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾರೆ. ಓರ್ವ ಸಹೋದರ 9ನೇ ತರಗತಿ ಓದುತ್ತಿದ್ದಾನೆ.
ಇದನ್ನೂ ಓದಿ:SSLCಯಲ್ಲಿ ಶೇ 83.89 ಫಲಿತಾಂಶ: ನಾಲ್ವರಿಗೆ 625ಕ್ಕೆ 625! ಚಿತ್ರದುರ್ಗ ಫಸ್ಟ್; ಯಾದಗಿರಿ ಲಾಸ್ಟ್