ಚಿಕ್ಕೋಡಿ: ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘನೆ ಕಾರಣಕ್ಕೆ ಸದಲಗಾ ಪುರಸಭೆಯ ನಾಲ್ವರ ಸದಸ್ಯತ್ವವನ್ನು ಅನರ್ಹಗೊಳಿಸಲಾಗಿದೆ ಎಂದು ಬಿಜೆಪಿ ಸದಸ್ಯ ಬಸವರಾಜ ಹಣಬರ ತಿಳಿಸಿದರು.
ನಗರದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸದಲಗಾ ಪುರಸಭೆ ವಾರ್ಡ್ ನಂಬರ್ 12ರ ಸುರೇಶ ಉದಗಾವೆ, ವಾರ್ಡ್ 5ರ ಮೆಹಬೂಬ ಕಾಳೆ, ವಾರ್ಡ್15ರ ನೌಸಾದ್ ಮುಜಾವರ ಹಾಗೂ ವಾರ್ಡ್ ನಂ 6ರ ಸುಜಾತಾ ಕುಂಬಾರ ಅವರ ಸದಸ್ಯತ್ವವನ್ನು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ ಎಂದರು.
ಪ್ರಕರಣದ ಹಿನ್ನೆಲೆ:
ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ವೇಳೆ ಬಿಜೆಪಿಯಿಂದ ಚುನಾಯಿತರಾಗಿದ್ದ ಈ ನಾಲ್ವರು ಸದಸ್ಯರು ಕಾಂಗ್ರೆಸ್ಗೆ ಬೆಂಬಲ ಸೂಚಿಸಿದ್ದರು. ಹೀಗಾಗಿ ಕಳೆದ 2020ರ ನ.03 ರಂದು ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ಸದಸ್ಯತ್ವ ರದ್ದುಪಡಿಸಬೇಕೆಂದು ಜಿಲ್ಲಾಧಿಕಾರಿಗೆ ಬಿಜೆಪಿ ಪಕ್ಷದಿಂದ ಮನವಿ ಸಲ್ಲಿಸಲಾಗಿತ್ತು. ಮನವಿ ಸ್ವೀಕರಿಸಿ ಸತ್ಯಾಸತ್ಯತೆ ಪರಿಶೀಲನೆ ನಡೆಸಿದ ಡಿಸಿ, 2021ರ ಅ.29 ರಂದು ಸದಸ್ಯತ್ವ ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದವರಿಗೆ ಸರಿಯಾದ ಶಿಕ್ಷೆಯಾಗಿದ್ದು, ಕಾನೂನು ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಬಿಜೆಪಿ ಸದಸ್ಯರ ಸಂತೋಷ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಜನಪ್ರತಿನಿಧಿಗಳು ತಾವು ಪ್ರತಿನಿಧಿಸಿದ ಪಕ್ಷ, ತತ್ವ ಸಿದ್ಧಾಂತಗಳಿಗೆ ಬದ್ಧರಾಗಿರಬೇಕು. ಅಧಿಕಾರದ ಆಸೆಯಿಂದ ಪಕ್ಷಾಂತರ ಮಾಡುವುದು ತಪ್ಪು ಎನ್ನುವ ಸಂದೇಶವನ್ನು ನ್ಯಾಯಾಂಗವು ಕಾಲ ಕಾಲಕ್ಕೆ ನೀಡುತ್ತಾ ಬಂದಿದೆ. ಈ ತೀರ್ಪು ಎಲ್ಲಾ ಜನಪ್ರತಿನಿಧಿಗಳಿಗೆ ಎಚ್ಚರಿಕೆ ಗಂಟೆಯಾಗಿದೆ. ಮುಂಬರುವ ದಿನಗಳಲ್ಲಿ ಸದಲಗಾ ಪುರಸಭೆಯಲ್ಲಿ ಬಿಜೆಪಿ ಅಧಿಕಾರ ಸ್ಥಾಪಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಪುರಸಭೆ ಸದಸ್ಯರಾದ ಅಭಿಜಿತ್ ಪಾಟೀಲ, ಹೇಮಂತ ಶಿಂಗೆ, ಪ್ರಶಾಂತ ಕರಂಗಳೆ, ಧರೆಪ್ಪ ಹವಾಲ್ದಾರ ಸೇರಿದಂತೆ ಇತರರು ಇದ್ದರು.