ಬೆಳಗಾವಿ:ಕೊರೊನಾ ಸೋಂಕು ಹರಡದಂತೆ ರಾಜ್ಯ ಸರ್ಕಾರ ಜನತಾ ಕರ್ಫ್ಯೂ ಜಾರಿಗೊಳಿಸಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಜಿಲ್ಲೆಯ ದಲ್ಲಾಳಿಗಳು ಮೆಣಸಿನಕಾಯಿ ಬೆಳೆದ ರೈತರನ್ನು ಶೋಷಿಸುತ್ತಿದ್ದಾರೆ. ಹೀಗಿದ್ದರೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಳಗಾವಿ: ಕರ್ಫ್ಯೂ ನೆಪದಲ್ಲಿ ದಲ್ಲಾಳಿಗಳಿಂದ ಅನ್ನದಾತರ ಶೋಷಣೆ
ದಲ್ಲಾಳಿಗಳು ಹಾಗೂ ಸಗಟು ವ್ಯಾಪಾರಿಗಳ ಮೋಸದ ವಿರುದ್ಧ ಖಾನಾಪುರ ತಾಲೂಕಿನ ಅವರೊಳ್ಳಿ, ಚಿಕ್ಕದಿನಕೊಪ್ಪ, ಕಗ್ಗಣಗಿ, ಕೊಡಚವಾಡ, ದೇಮಿನಕೊಪ್ಪ, ಬಿಳಕಿ, ಭಂಕಿ ಸೇರಿ 20ಕ್ಕೂ ಅಧಿಕ ಗ್ರಾಮಗಳ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಖಾನಾಪುರ ತಾಲೂಕಿನ ಪೂರ್ವಭಾಗದ ಹಸಿಮೆಣಸಿನಕಾಯಿ ಬೆಳೆದ ರೈತರು ದಲ್ಲಾಳಿಗಳ ಶೋಷಣೆಯಿಂದ ಕಣ್ಣೀರಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಾರ್ಕೆಟ್‌ನಲ್ಲಿ ಕೆಜಿ ಮೆಣಸಿನಕಾಯಿಗೆ 50-60 ರೂ. ಇದೆ. ಆದರೆ ರೈತರ ಊರುಗಳಿಗೆ ನೇರವಾಗಿ ತಕ್ಕಡಿ ಹಿಡಿದು, ವಾಹನ ತೆಗೆದುಕೊಂಡು ಹೋಗುತ್ತಿರುವ ದಲ್ಲಾಳಿಗಳು ರೈತರಿಂದ ಒಂದು ಚೀಲಕ್ಕೆ 80-100 ರೂ. ದರ ನಿಗದಿ ಮಾಡುತ್ತಿದ್ದಾರೆ. ಒಂದು ಚೀಲದಲ್ಲಿ 50ರಿಂದ 60 ಕೆಜಿ ಮೆಣಸಿನಕಾಯಿ ಹಿಡಿಯುತ್ತವೆ. ಜನತಾ ಕರ್ಫ್ಯೂ ಹೆಸರಿನಲ್ಲಿ ದಲ್ಲಾಳಿಗಳು ರೈತರನ್ನು ಮಾರುಕಟ್ಟೆಗೆ ಹೋಗಲು ಬಿಡದೆ ತಮಗಿಷ್ಟವಾದ ಬೆಲೆಗೆ ಖರೀದಿಸುತ್ತಿದ್ದಾರೆ.
ದಲ್ಲಾಳಿಗಳು ಹಾಗೂ ಸಗಟು ವ್ಯಾಪಾರಿಗಳ ಮೋಸದ ವಿರುದ್ಧ ಖಾನಾಪುರ ತಾಲೂಕಿನ ಅವರೊಳ್ಳಿ, ಚಿಕ್ಕದಿನಕೊಪ್ಪ, ಕಗ್ಗಣಗಿ, ಕೊಡಚವಾಡ, ದೇಮಿನಕೊಪ್ಪ, ಬಿಳಕಿ, ಭಂಕಿ ಸೇರಿ 20ಕ್ಕೂ ಅಧಿಕ ಗ್ರಾಮಗಳ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ. ವಾಹನ ಓಡಾಟ ಇಲ್ಲದಿರೋದನ್ನೇ ಸಗಟು ವ್ಯಾಪಾರಿಗಳು, ದಲ್ಲಾಳಿಗಳು ಬಂಡವಾಳ ಮಾಡಿಕೊಂಡಿದ್ದಾರೆ ಎಂದು ವಿಡಿಯೋ ಮೂಲಕ ರೈತರು ತಮ್ಮ ನೋವು ಹೊರಹಾಕಿದ್ದಾರೆ.