ಬೆಳಗಾವಿ : ಅಧಿಕಾರಲ್ಲಿದ್ದವರು ಆಯಾ ಕಾಮಗಾರಿಗಳನ್ನು ಉದ್ಘಾಟಿಸುವುದು ವಾಡಿಕೆ. ಆದರೆ ನಾಳೆ ಅಥಣಿಯಲ್ಲಿ ಉದ್ಘಾಟನೆ ಆಗುತ್ತಿರುವ ಕಾಮಗಾರಿಗಳು ಬಿಜೆಪಿ ಸರ್ಕಾರದ ಕೊಡುಗೆ ಎಂದು ಮಾಜಿ ಶಾಸಕ ಮಹೇಶ ಕುಮಠಳ್ಳಿ ತಿಳಿಸಿದರು.
ಅಥಣಿ ತಾಲ್ಲೂಕಿನ ಕೊಕಟನೂರಿನ ಪಶುವೈದ್ಯಕೀಯ ಮಹಾವಿದ್ಯಾಲಯ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಅಡಿಗಲ್ಲು ಸಮಾರಂಭಕ್ಕೆ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಹೇಶ ಕುಮಠಳ್ಳಿ ಮಾತನಾಡಿದರು.
ಪಶು ವೈದ್ಯಕೀಯ ಕಾಲೇಜಿನ ಸಂಪೂರ್ಣ ಶ್ರೇಯಸ್ಸು ಬಿಜೆಪಿಗೆ ಸೇರುತ್ತದೆ. ಅದರಲ್ಲಿ ನಮ್ಮದೊಂದು ಅಳಿಲು ಸೇವೆಯಿದೆ. 2009ರ ಸುಮಾರಿಗೆ ನಾನೂ ಕೂಡ ಈ ಭಾಗದಲ್ಲಿ ಇಂಜಿನಿಯರಿಂಗ್ ಕಾಲೇಜು ಬೇಡ, ಪಶು ವೈದ್ಯಕೀಯ ಕಾಲೇಜು ಆರಂಭಿಸಿದರೆ ರೈತರಿಗೆ ಅನುಕೂಲ ಆಗುತ್ತದೆ ಎಂದು ಒತ್ತಾಯಿಸಿದ್ದೆ. ಬಾವುರಾವ ದೇಶಪಾಂಡೆಯವ ಸವಿನೆನಪಿಗೋಸ್ಕರ ಪಶು ವೈದ್ಯಕೀಯ ಕಾಲೇಜು ಆರಂಭಿಸಲಾಗಿದೆ. ಕಾಲೇಜಿಗೆ ಅವರ ಹೆಸರನ್ನೇ ಇಡಬೇಕು. ಯಾವುದೇ ಸಂದರ್ಭದಲ್ಲೂ ಆ ಹೆಸರನ್ನು ಬದಲಾವಣೆ ಮಾಡಬಾರದು ಎಂದು ನಾವು ಪ್ರಸ್ತಾವಣೆ ಸಲ್ಲಿಸಿದ್ದೇವೆ. 2019-23ರ ಅವಧಿಯಲ್ಲಿ ಕಟ್ಟಡದ ಕೆಲಸ ಸಂಪೂರ್ಣವಾಗಿದೆ. ಇದಕ್ಕೆ ಬಿಜೆಪಿ ಕೊಡುಗೆ ಅಪಾರ. ಜಗಜ್ಯೋತಿ ಬಸವಣ್ಣನವರ ಪುತ್ಥಳಿಯನ್ನು ಸಿಎಂ ಸಿದ್ದರಾಮಯ್ಯ ಅನಾವರಗೊಳಿಸುತ್ತಿದ್ದಾರೆ. ಈ ಕಾಮಗಾರಿಗೆ ನನ್ನ ಅಧಿಕಾರಾವಧಿಯಲ್ಲಿ 19 ಲಕ್ಷ ರೂ. ಅನುದಾನ ಒದಗಿಸಿದ್ದೇನೆ. ಬಸವೇಶ್ವರ ವೃತ್ತ ಅಭಿವೃದ್ದಿಗೆ 5 ಲಕ್ಷ ರೂ. ನೀಡಿದ್ದೇನೆ ಎಂದರು.