ಬೆಳಗಾವಿ: ನಾನು ಕಾಂಗ್ರೆಸ್ ಸೇರ್ಪಡೆಯಾಗುವ ಪ್ರಶ್ನೆಯೇ ಇಲ್ಲ. ವಿನಾಕಾರಣ ರಾಜಕೀಯ ವಿರೋಧಿಗಳು ಮಾಧ್ಯಮಗಳಲ್ಲಿ ನನ್ನ ಹೆಸರು ಕೆಡಿಸುವ ಹುನ್ನಾರ ನಡೆಸಿದ್ದಾರೆ ಎಂದು ಬಿಜೆಪಿ ಮಾಜಿ ಶಾಸಕ ಅನಿಲ ಬೆನಕೆ ಆರೋಪಿಸಿದರು. ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 25 ವರ್ಷಗಳಿಂದ ನಿಷ್ಠಾವಂತ ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಎರಡು ಬಾರಿ ಟಿಕೆಟ್ ಕೇಳಿದಾಗ ಕೊಟ್ಟಿರಲಿಲ್ಲ. ಮೂರನೇ ಬಾರಿ 2018ರಲ್ಲಿ ಟಿಕೆಟ್ ನೀಡಿದಾಗ ಉತ್ತರ ಕ್ಷೇತ್ರದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ಸಾಧಿಸಿತ್ತು ಎಂದರು.
ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಕ್ಕಿಲ್ಲ ಎಂದು, ಬಿಜೆಪಿ ಬಿಡುವುದಿಲ್ಲ ಮತ್ತು ಕಾಂಗ್ರೆಸ್ ಸೇರುವುದಿಲ್ಲ. ಅನಿಲ್ ಬೆನಕೆ ಅವರು ಕಾಂಗ್ರೆಸ್ ಸೇರುವ ಸಲುವಾಗಿ ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಕೆಲ ಮಾಧ್ಯಮಗಳು ಪ್ರಸಾರ ಮಾಡುತ್ತಿವೆ. ನಾನು ಆರು ತಿಂಗಳ ಹಿಂದೆ ಜಗದೀಶ್ ಶೆಟ್ಟರ್ ಅವರನ್ನು ಭೇಟಿಯಾಗಿದ್ದು ಬಿಟ್ಟರೆ, ಮತ್ತೆ ಅವರನ್ನು ಭೇಟಿಯಾಗಿಲ್ಲ ಮತ್ತು ಅವರೊಂದಿಗೆ ನಾನು ಸಂಪರ್ಕದಲ್ಲಿಲ್ಲ ಎಂದು ಸ್ಪಷ್ಟಪಡಿಸಿದರು.
ಹೈಕಮಾಂಡ್ ಏನೋ ಲೆಕ್ಕಾಚಾರ ಹಾಕಿ, ನನಗೆ ಟಿಕೆಟ್ ನೀಡಿರಲಿಲ್ಲ. ಈಗ ಭಾರತೀಯ ಜನತಾ ಪಾರ್ಟಿಯನ್ನು ಬಿಡುವ ಪ್ರಶ್ನೆಯೇ ಇಲ್ಲ. ಸದ್ಯ ಲೋಕಸಭೆ ಚುನಾವಣೆಗೆ ತಯಾರಿ ನಡೆಸಿದ್ದೇವೆ. ನೂರಕ್ಕೆ ನೂರರಷ್ಟು ನಾನೂ ಕೂಡ ಟಿಕೆಟ್ ಕೇಳುತ್ತೇನೆ. ಪಕ್ಷ ಅವಕಾಶ ನೀಡಿದರೆ ಸ್ಪರ್ಧಿಸುವುದು ನಿಶ್ಚಿತ. ಒಂದು ವೇಳೆ ಬೇರೆ ಯಾರಿಗೆ ಟಿಕೆಟ್ ಕೊಟ್ಟರೂ, ಅವರ ಗೆಲುವಿಗೆ ಶ್ರಮಿಸುತ್ತೇನೆ. ವೈಯಕ್ತಿಕವಾಗಿ ನನ್ನ ಹೆಸರು ಹಾಳು ಮಾಡುವ ಉದ್ದೇಶದಿಂದ ಕಾಂಗ್ರೆಸ್ ಸೇರುತ್ತೇನೆ ಎಂದು ಸುಳ್ಳು ಚರ್ಚೆ ಹುಟ್ಟು ಹಾಕಿರಬಹುದು. ನನ್ನ ವಿರುದ್ಧ ಕುತಂತ್ರ ನಡೆದಿರಬಹುದು, ವಿರೋಧ ಪಕ್ಷಕ್ಕಿಂತ ನಮ್ಮ ಪಕ್ಷದಲ್ಲೇ ಕುತಂತ್ರಿಗಳು ಹೆಚ್ಚು ಇರುತ್ತಾರೆ ಎಂದು ಹೇಳಿದರು.