ಕರ್ನಾಟಕ

karnataka

ETV Bharat / state

ಬಿಜೆಪಿಯವರು ಕೂಗುಮಾರಿಗಳಂತೆ ವರ್ತಿಸುತ್ತಿದ್ದಾರೆ: ಮಾಜಿ ಸಚಿವ ಹೆಚ್​ ಎಂ ರೇವಣ್ಣ ಲೇವಡಿ - ಅನಂತಕುಮಾರ ಹೆಗಡೆ ಹೇಳಿಕೆ

ಬಿಜೆಪಿ ನಾಯಕರ ವಿರುದ್ಧ ಮಾಜಿ ಸಚಿವ ಹೆಚ್​ ಎಂ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಸಚಿವ ಹೆಚ್​ ಎಂ ರೇವಣ್ಣ
ಮಾಜಿ ಸಚಿವ ಹೆಚ್​ ಎಂ ರೇವಣ್ಣ

By ETV Bharat Karnataka Team

Published : Jan 16, 2024, 7:28 PM IST

ಮಾಜಿ ಸಚಿವ ಹೆಚ್​ ಎಂ ರೇವಣ್ಣ

ಬೆಳಗಾವಿ: ಕಾಂಗ್ರೆಸ್​​ನವರು ಬಿಜೆಪಿಯಿಂದ ಸಭ್ಯತೆ ಕಲಿಯುವ ಅವಶ್ಯಕತೆ ಇಲ್ಲ. ಆರ್​ಎಸ್​ಎಸ್​, ಬಿಜೆಪಿಯವರು ಸಂಸ್ಕಾರವಂತರು ಎಂದು ಹೇಳುತ್ತಿದ್ದರು. ಆದರೆ, ಇತ್ತೀಚೆಗೆ ಗೊಂದಲ ಮತ್ತು ಕೆಟ್ಟ ಶಬ್ದಗಳನ್ನು ಬಳಸುತ್ತಿದ್ದಾರೆ. ಕೆಲವರಂತೂ ಕೂಗುಮಾರಿಗಳಂತೆ ವರ್ತಿಸುತ್ತಿದ್ದಾರೆ ಎಂದು ಮಾಜಿ ಸಚಿವ ಹೆಚ್ ​ಎಂ ರೇವಣ್ಣ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್​​ನವರು ಸಭ್ಯತೆ ಕಲಿಯಲಿ ಎಂಬ ಸಂಸದ ಅನಂತಕುಮಾರ ಹೆಗಡೆ ಹೇಳಿಕೆ ವಿಚಾರಕ್ಕೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಅವರು, ‘‘ಇದೇನು ಮೊದಲಲ್ಲ. ಈ ರಾಷ್ಟ್ರದಲ್ಲಿ ಅಂಬೇಡ್ಕರ್ ಅವರ ಸಂವಿಧಾನವನ್ನು ನಾವೆಲ್ಲರೂ ಅಪ್ಪಿ, ಒಪ್ಪಿ ಬಾಳುತ್ತಿದ್ದೇವೆ. ಆದರೆ, ಸಂವಿಧಾನವನ್ನೇ ಬದಲಿಸುತ್ತೇವೆ ಎಂದು ಹೇಳಿದ್ದ ಆ ವ್ಯಕ್ತಿ ಸಂಸ್ಕಾರವಂತರಾಗಿ ಮಾತನಾಡುತ್ತಿದ್ದಾರೆ. ಈ ವಿಚಾರದಲ್ಲಿ ಬಿಜೆಪಿಯವರು ಎಷ್ಟು ಜಾಣರು ಎಂದರೆ ಒಳ್ಳೆಯ ಮಗು ಹುಟ್ಟಿದರೆ ನಮ್ಮದು, ಕೆಟ್ಟ ಮುಗು ಹುಟ್ಟಿದರೆ ಬೀದಿಯದ್ದು ಎನ್ನುತ್ತಾರೆ‘‘ ಎಂದು ಲೇವಡಿ ಮಾಡಿದರು.

ಟೀಕೆ ಮಾಡಲು ಇವರಿಗೆ ಒಳ್ಳೆಯ ಪದಗಳೇ ಸಿಗುವುದಿಲ್ಲ. ಹಿಂದೆ ಜೆ ಎಚ್‌ ಪಟೇಲರು ಸೇರಿ ಅನೇಕ ರಾಜಕಾರಣಿಗಳು ಬಹಳ ತೀಕ್ಷ್ಣವಾಗಿ ಟೀಕೆ ಮಾಡುತ್ತಿದ್ದರು. ಆದರೆ, ಬಿಜೆಪಿಯವರಿಗೆ ಪದಗಳು ಸಿಗುವುದಿಲ್ಲವೇ? ಈ ರೀತಿ ಮಾತಾಡುವುದು ಸಾರ್ವಜನಿಕವಾಗಿ ಒಳ್ಳೆಯದಲ್ಲ. ಬಿಜೆಪಿಯವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್​ ಎಂದು ಹೇಳುತ್ತಾರೆ. ಹಾಗಾದರೆ ಒಂದು ಸಮುದಾಯ ಬಿಟ್ಟು ಉಳಿದವುಗಳ ಅಭಿವೃದ್ಧಿ ಮಾಡಲು ಆಗುತ್ತಾ? ಒಂದು ದಿನವಾದರೂ ಮಾಧ್ಯಮಗಳ ಮುಂದೆ ಬಂದು ಅವರ ಕಾರ್ಯಕ್ರಮಗಳ ಬಗ್ಗೆ ಮೋದಿ ಹೇಳುತ್ತಾರಾ? ಬರೀ ಅಲ್ಲಿಯೇ ಕುಳಿತುಕೊಂಡು ಸುಳ್ಳು ಹೇಳಿ, ಪ್ರಪಂಚ ಸುತ್ತುತ್ತೇವೆ ಎನ್ನುತ್ತಾರೆ ಎಂದು ಕಿಡಿಕಾರಿದರು.

’ರಾಮಮಂದಿರ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡ್ತಿದೆ‘:ರಾಮಮಂದಿರ ಉದ್ಘಾಟನೆ ವಿಚಾರ ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದಿಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಅದೊಂದು ಟ್ರಸ್ಟಿನ ಕಾರ್ಯಕ್ರಮ. ನಾವೇನು ಹಿಂದೂಗಳಲ್ಲವಾ? ಈ ದೇಶದಲ್ಲಿ ಇರೋದು ಕೇವಲ ಹಿಂದೂಗಳು ಅಷ್ಟೇನಾ? ಈ ದೇಶದಲ್ಲಿ ಮುಸ್ಲಿಂರು, ಜೈನರು, ಬೌದ್ಧರು, ಇಸಾಯಿಗಳು, ಕ್ರಿಶ್ಚಿಯನ್, ದಲಿತರು ಇಲ್ಲವಾ? ಇವರೆಲ್ಲರನ್ನೂ ಬಿಟ್ಟು ಹಿಂದೂಗಳು ಎಂದರೆ ಹೇಗೆ? ನಿಮಗೆ ಹೇಳಲು ಯಾವುದೇ ಮಾತುಗಳು ಇಲ್ಲ. ಜಾತಿ ಆಧಾರದ ಮೇಲೆ ದೇಶ ಒಡೆದು ಆಳುವುದು ಸರಿಯಲ್ಲ. ಸಂವಿಧಾನದಲ್ಲಿ ಸರ್ವರಿಗೂ ಸಮಪಾಲು, ಸಮಬಾಳು ಇದ್ದು, ಅದರಡಿ ಹೋಗೋಣ. ಮಂತ್ರಿ ಆಗುವಾಗ ನೀವು ಸಂವಿಧಾನ ಬದ್ಧವಾಗಿ ಪ್ರಮಾಣವಚನ ಸ್ವೀಕರಿಸುತ್ತೀರಿ. ವಸಂವಿಧಾನಾತ್ಮಕವಾಗಿ ರಾಗ, ದ್ವೇಷವಿಲ್ಲದೇ ಕೆಲಸ ಮಾಡುತ್ತೇನೆ ಎಂದು ಹೇಳುತ್ತೀರಿ. ಆದರೆ, ಇದು ರಾಗ, ದ್ವೇಷ ಅಲ್ಲವೇ? ಎಂದು ಖಾರವಾಗಿ ಪ್ರಶ್ನಿಸಿದರು.

ರಾಮಮಂದಿರ ಉದ್ಘಾಟನೆಯಿಂದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಹುದಾ ಎಂಬ ಬಗ್ಗೆ ಪ್ರಶ್ನೆಗೆ, ನಮ್ಮ ಪ್ರಕಾರ ಇಲ್ಲ, ಕೇವಲ ಅದು ಅವರ ಭ್ರಮೆ ಅಷ್ಟೇ. ಯಾವ ರಾಜ್ಯದಲ್ಲಾದ್ರೂ ನೇರವಾಗಿ ಅಧಿಕಾರಕ್ಕೆ ಬಂದಿದೆಯಾ? ಇಷ್ಟು ರಾಜ್ಯಗಳಲ್ಲಿ ನಾವು ಆಡಳಿತ ಮಾಡುತ್ತಿದ್ದೇವೆ ಎನ್ನುವ ಬಿಜೆಪಿ ಎಷ್ಟು ರಾಜ್ಯಗಳಲ್ಲಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದಿದೆ? ಹಿಂಬಾಗಿಲಿನಿಂದ ಬಂದಿದ್ದೆ ಜಾಸ್ತಿ. ಬೇರೆ ಪಕ್ಷದದಿಂದ ಗೆದ್ದವರನ್ನು ಆಪರೇಶನ್ ಕಮಲ ಅಂತೀರೋ, ಅವರ ಮುಟ್ಟಾಳತನ ಅಂತೀರೋ? ನೀವೇ ಹೇಳಿ ಎಂದರು.

ಲೋಕಸಭೆ ಚುನಾವಣೆಯಲ್ಲಿ ಜನ ಬಿಜೆಪಿಗೆ ಪಾಠ ಕಲಿಸಿಯೇ ಕಲಿಸುತ್ತಾರೆ. ಇದು ಕೇವಲ ಘೋಷಣೆ ಸರ್ಕಾರ, ಯೋಜನೆಗಳ ಹೆಸರು ಬದಲಿಸುವ ಸರ್ಕಾರ. ಪ್ಲಾನಿಂಗ್ ಕಮಿಷನ್ ಹೆಸರು ನೀತಿ ಆಯೋಗ ಎಂದು ಬದಲಿಸಿದರೆ ಮುಗಿಯಿತೆ? ಇನ್ನು ಅನಂತಕುಮಾರ ಹೆಗಡೆ ವಿಚಾರದಲ್ಲಿ ಬಿಜೆಪಿಯವರಿಗೆ ಗೊಂದಲವಿದೆ. ಆ ಹೇಳಿಕೆ ವಯಕ್ತಿಕವೋ ಅಥವಾ ಪಕ್ಷದ್ದೋ ಎಂಬ ಗೊಂದಲ ಇರುತ್ತದೆ ಎಂದು ಹೆಚ್​ ಎಂ ರೇವಣ್ಣ ಕುಟುಕಿದರು.

ಇದನ್ನೂ ಓದಿ:ಸಂಸ್ಕೃತಿ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಬಹಿರಂಗ ಚರ್ಚೆಗೆ ಬರಲಿ: ಅನಂತ್ ಕುಮಾರ್​ ಹೆಗಡೆ

ABOUT THE AUTHOR

...view details