ಕರ್ನಾಟಕ

karnataka

ETV Bharat / state

ಕನ್ನಡ ವಿರೋಧಿ ಎನಿಸಿದ್ದ ಇವರೀಗ ಕರುನಾಡ ಸೇವಕ...ಹೃದಯ ವೈಶಾಲ್ಯತೆಗೆ ಗಡಿ ಇಲ್ಲವೆಂದು ತೋರಿದ ಮೋರೆ - Atharva Foundation to help one another

ಮೇಯರ್​ ಆಗಿದ್ದ ವೇಳೆ ಕನ್ನಡ ವಿರೋಧಿ ಎನಿಸಿದ್ದ ಇವರೀಗ ಕರುನಾಡ ಸೇವಕ. ವೃದ್ಧರಿಗೆ ಆಶ್ರಯ ನೀಡಿದ ಧೀಮಂತ. ನೂರಾರು ಅನಾಥ ಶವಗಳಿಗೆ ಅಂತ್ಯಸಂಸ್ಕಾರ ಮಾಡಿದ ಪುಣ್ಯವಂತ. ಹೃದಯ ವೈಶಾಲ್ಯತೆಗೆ ಗಡಿ ಎಂಬುದಿಲ್ಲ ಅಂತ ತೋರಿಸಿಕೊಟ್ಟ ಕುಂದಾ ನಗರಿಯ ಕುಡಿ...

former Mayor of Belgam Vijay More's  social service melted Kannda peoples heart
ಕನ್ನಡ ವಿರೋಧಿ ಎನಿಸಿದ್ದ ಇವರೀಗ ಕರುನಾಡ ಸೇವಕ

By

Published : Feb 22, 2020, 9:08 PM IST

Updated : Feb 22, 2020, 10:20 PM IST

ಬೆಳಗಾವಿ: ಮಗನಲ್ಲದಿದ್ರೂ ಮಕ್ಕಳಿಗಿಂತ ಅಕ್ಕರೆ ತೋರುವ ದೇವರು ಕೊಟ್ಟ ಮಗನೀತ. ಅದಕ್ಕೆ ಬಾಳ ಇಳಿ ಸಂಜೆಯೊಳಿರುವ ಈ ಜೀವಗಳು ನಗು ನಗುತಲೇ ಇವರೊಂದಿಗೆ ಹರಟ್ತಾರೆ. ಮೈದಡವ್ತಾರೆ, ಅಕ್ಕರೆ-ಆರೈಕೆ ತೋರುತ್ತಿದಾರೆ. ಈ ಹಿರಿಯ ಜೀವಗಳಿಗಿನ್ನೇನು ಬೇಕು. ಅನಾಥರ ಬಾಳಿನ ಆತ್ಮಬಂಧು ವಿಜಯ ಮೋರೆ.

ಅವತ್ತು 2005ರ ನವೆಂಬರ್ 1, ಕನ್ನಡ ವಿರೋಧಿ ಎಂಬ ಹಣಪಟ್ಟಿಯಿಂದಾಗಿ ಅಂದು ಬೆಳಗಾವಿ ಮೇಯರ್ ಆಗಿದ್ದ ಇದೇ ವಿಜಯ ಮೋರೆ ವಿಧಾನಸೌಧಕ್ಕೆ ಹೋಗಿದ್ದರು. ಆಗಲೇ ಇವರ ಮುಖಕ್ಕೆ ಕನ್ನಡ ಪರ ಹೋರಾಟಗಾರರು ಮಸಿ ಬಳಿದಿದ್ದರು. ಮೋರೆ ಕರುನಾಡಿನಲ್ಲಿದ್ದೂ ನಾಡದ್ರೋಹಿ ನಿಲುವು ತಾಳಿದರೆಂದು ಅದು ದೊಡ್ಡ ಸದ್ದಾಗಿ, ಸುದ್ದಿಯಾಗಿತ್ತು. ಈಗ ಬರೋಬ್ಬರಿ 15 ವರ್ಷದ ಬಳಿಕ ನೋಡಿದ್ರೇ ಅದೇ ಮೋರೆ ಕಂಪ್ಲೀಟ್ ಬದಲಾಗಿದ್ದಾರೆ. ತಮ್ಮ ಮಾನವೀಯ ಸೇವೆಯಿಂದ ಕನ್ನಡಿಗರ ಹೃದಯ ಗೆಲ್ಲುತ್ತಿದ್ದಾರೆ.

ಹೌದು, ಮೋರೆ ಮೇಯರ್ ಆಗುವ ಮೊದಲೇ ಸಮಾಜ ಸೇವೆ ಮಾಡ್ತಿದ್ದರು. 1998ರಲ್ಲಿ ಬೆಳಗಾವಿಯ ಹೊರವಲಯದಲ್ಲಿ ದಾನಿಯೊಬ್ಬರು ನೀಡಿದ ಜಮೀನಿನಲ್ಲಿ ಶಾಂತಾಯಿ ವೃದ್ಧಾಶ್ರಮ ಪ್ರಾರಂಭಿಸಿದ್ದರು. ಹೆತ್ತ ಮಕ್ಕಳಿಗೆ ಬೇಡವಾಗಿ ಅನಾಥರಾಗಿದ್ದ ಅದೆಷ್ಟೋ ಜೀವಗಳಿಗೆ ಉಚಿತ ಊಟ, ವಸತಿ, ಆರೋಗ್ಯ ಸೇವೆ ಹೀಗೆ ಎಲ್ಲ ಸೌಕರ್ಯ ಒದಗಿಸಿದ್ದಾರೆ. ಆ ಮೂಲಕ ಪ್ರೀತಿ-ವಾತ್ಸಲ್ಯ ತೋರುತ್ತಿದ್ದಾರೆ. ಬಾಳ ಮುಸ್ಸಂಜೆಯಲ್ಲಿರೋ ಜೀವಗಳ ಬದುಕಿಗೆ ಭರವಸೆಯ ಬೆಳಕಾಗಿದ್ದಾರೆ.

ಮಸಿ ಬೆಳೆದಿದ್ದ ಕನ್ನಡ ಪರ ಹೋರಾಟಗಾರರು

ಇಷ್ಟೇ ಅಲ್ಲ, ಅನಾಥ ಶವಗಳಿಗೂ ತಾವೇ ಮುಂದೆ ನಿಂತು ಅಂತ್ಯಸಂಸ್ಕಾರ ಮಾಡ್ತಾರೆ. ಈವರೆಗೆ 640ಕ್ಕೂ ಅಧಿಕ ಅನಾಥ ಶವಗಳ ಅಂತ್ಯಸಂಸ್ಕಾರ ಮಾಡಿದ್ದಾರೆ. ಅಥರ್ವ ಫೌಂಡೇಶನ್ ಆರಂಭಿಸಿ ದಾನಿಗಳ ನೆರವು ಪಡೆದು ಚಿಕಿತ್ಸೆಗೆ ಹಣ ಭರಿಸಲು ಆಗದ ಬಡ ರೋಗಿಗಳ ಚಿಕಿತ್ಸಾ ವೆಚ್ಚ ಭರಿಸ್ತಾರೆ. ಈವರೆಗೂ 300ಕ್ಕೂ ಅಧಿಕ ಬಡರೋಗಿಗಳಿಗೆ ಆರ್ಥಿಕ ನೆರವು ನೀಡಿದ್ದಾರೆ. ತಾವೇ ಸ್ವತಃ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಸಾಂತ್ವನ ಹೇಳಿ ಅವರಲ್ಲಿ ಆತ್ಮಸ್ಥೈರ್ಯ ತುಂಬುತ್ತಾರೆ.

ಯಾವುದೇ ಫಲಾಪೇಕ್ಷೆಯಿಲ್ಲದೇ ನೊಂದ ಜೀವಗಳ ಸೇವೆ ಮಾಡುತ್ತಾ ಮಾನವೀಯತೆಗೆ ಗಡಿ ಇಲ್ಲ ಅಂತಾ ತೋರುತ್ತಿದ್ದಾರೆ. ಕನ್ನಡಗರ ಜತೆಗಿದ್ದು ಕನ್ನಡಿಗರೇ ಆಗಿ ಹೃದಯ ವೈಶಾಲ್ಯ ಹೊಂದಿದ ವಿಜಯ ಮೋರೆ ಇವರೂ ನಮ್ಮವರೇ. ಅನ್ನೋ ಭಾವ ಇಂದು ಕುಂದಾನಗರಿಗರ ಮನದಲ್ಲಿ ಮೂಡಿದೆ.

Last Updated : Feb 22, 2020, 10:20 PM IST

ABOUT THE AUTHOR

...view details