ಬೆಳಗಾವಿ/ಹುಬ್ಬಳ್ಳಿ:ಹುಲಿ ಉಗುರಿನ ಮಾದರಿ ಪೆಂಡೆಂಟ್ ಧರಿಸಿದ್ದ ತಮ್ಮ ಪುತ್ರನ ಫೋಟೋ ವೈರಲ್ ಆದ ಹಿನ್ನೆಲೆಯಲ್ಲಿ ಇಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ನಿವಾಸಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪೆಂಡೆಂಟ್ ವಶಕ್ಕೆ ಪಡೆದಿದ್ದಾರೆ. ಬೆಳಗಾವಿಯ ಕುವೆಂಪು ನಗರದಲ್ಲಿ ಇರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಿವಾಸಕ್ಕೆ ಡಿಎಫ್ಓ ಶಂಕರ ಕಲ್ಲೋಳಿಕರ್ ಎಸಿಎಫ್ ಸುರೇಶ ತೇಲಿ ನೇತೃತ್ವದ ತಂಡ ತೆರಳಿ ಪರಿಶೀಲನೆ ನಡೆಸಿತು. ಈ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್, ಮೃಣಾಲ್ ಹೆಬ್ಬಾಳ್ಕರ್ ಅವರಿಂದ ಲಾಕೆಟ್ ಕುರಿತು ಅಧಿಕಾರಿಗಳು ಮಾಹಿತಿ ಪಡೆದುಕೊಂಡರು.
ಮದುವೆ ಸಂದರ್ಭದಲ್ಲಿ ಸಂಬಂಧಿಕರು ಗಿಫ್ಟ್ ಕೊಟ್ಟಿದ್ದರು. ಇದು ಪ್ಲ್ಯಾಸ್ಟಿಕ್ ಹುಲಿ ಉಗುರಿನ ಪೆಂಡೆಂಟ್ ಆಗಿದೆ. ಅರಣ್ಯಾಧಿಕಾರಿಗಳ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಮೃಣಾಲ್ ಹೆಬ್ಬಾಳ್ಕರ್ ತಿಳಿಸಿದರು. ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಕಡೆಯಿಂದ ಮಾಹಿತಿ ಸಂಗ್ರಹ ಮಾಡಿದ ಅಧಿಕಾರಿಗಳು, ಹುಲಿ ಉಗುರಿನ ಮಾದರಿ ಪೆಂಡೆಂಟ್ ಅನ್ನು ಎಫ್ಎಸ್ಎಲ್ಗೆ ಪರೀಕ್ಷೆಗೆ ಕಳುಹಿಸಲು ಮುಂದಾಗಿದ್ದಾರೆ. ಮುಂದಿನ ತನಿಖೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕೈಗೊಂಡಿದ್ದಾರೆ. ಮದುವೆ ಸೇರಿ ಮತ್ತಿತರ ಸಮಾರಂಭಗಳಲ್ಲಿ ಮೃಣಾಲ್ ಹುಲಿಯ ಉಗುರಿನ ಮಾದರಿ ಪೆಂಡೆಂಟ್ ಧರಿಸಿದ್ದ ಫೋಟೋ ವೈರಲ್ ಆಗಿತ್ತು.
ನಾನು ಶುದ್ಧ ಸಸ್ಯಾಹಾರಿ ಆಗಿದ್ದೇನೆ. ಹಾಗಾಗಿ, ನಮ್ಮ ಮನೆಯಲ್ಲಿ ವನ್ಯಜೀವಿ ಉತ್ಪನ್ನಗಳು ಬರಲು ಸಾಧ್ಯವಿಲ್ಲ. ಹುಲಿ, ನವಿಲು ದೂರ ಉಳಿಯಿತು. ಕುರಿ, ಕೋಳಿ, ಆಕಳು ಕೊಲ್ಲುವುದನ್ನೇ ನಾನು ವಿರೋಧಿಸುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದಾರೆ.