ಬೆಳಗಾವಿ:ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ, ಆ ಸಂಪುಟದಲ್ಲಿ ಜಾರಕಿಹೊಳಿ ಸಹೋದರರಲ್ಲಿ ಒಬ್ಬರು ಮಂತ್ರಿಯಾಗುತ್ತಾ ಬಂದಿದ್ದಾರೆ. ಆ ಪರಂಪರೆ ಮತ್ತೆ ಮುಂದುವರಿದಿದ್ದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನಾಲ್ಕನೇ ಬಾರಿ ಮಂತ್ರಿ ಸ್ಥಾನ ಒಲಿಸಿಕೊಂಡಿದ್ದಾರೆ. ಇಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸಂಪುಟ ದರ್ಜೆ ಸಚಿವರಾಗಿ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಾಲ್ಕು ಬಾರಿ ಯಮಕನಮರಡಿ ಕ್ಷೇತ್ರದಿಂದ ಗೆದ್ದಿರುವ ಸತೀಶ ನಾಲ್ಕನೇ ಬಾರಿ ಮಂತ್ರಿಯಾಗಿದ್ದು ವಿಶೇಷವಾಗಿದೆ.
ರಾಜ್ಯದಲ್ಲೆ ಅತ್ಯಂತ ಪ್ರಭಾವಿ ರಾಜಕೀಯ ಮನೆತನವಾಗಿ ಗುರುತಿಸಿಕೊಂಡಿರುವ ಜಾರಕಿಹೊಳಿ ಕುಟುಂಬ, ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬರುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾ ಬಂದಿದೆ. ಹೀಗಾಗಿ ಪ್ರತಿ ಸರ್ಕಾರದಲ್ಲಿ ಜಾರಕಿಹೊಳಿ ಸಹೋದರರಲ್ಲಿ ಒಬ್ಬರಿಗೆ ಮಂತ್ರಿ ಸ್ಥಾನ ಒಲಿದು ಬರುತ್ತಿದೆ. 2004-05ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಧರ್ಮಸಿಂಗ್ ಸಂಪುಟದಲ್ಲಿ ಜವಳಿ ಖಾತೆ ಸಚಿವರಾಗಿದ್ದ ಸತೀಶ, 2013 ರಿಂದ 2016ರವರೆಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಅಬಕಾರಿ ಮತ್ತ ಸಣ್ಣ ಕೈಗಾರಿಕೆ ಖಾತೆ ಸಚಿವರಾಗಿದ್ದರು.
ನಂತರ 2018ರ ಡಿ.26 ರಿಂದ ಜುಲೈ 23, 2019ರವರೆಗೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆ ಸಚಿವರಾಗಿಯೂ ಕೆಲಸ ಮಾಡಿದ್ದರು. ಈ ಬಾರಿಯ ಕಾಂಗ್ರೆಸ್ ಸರ್ಕಾರದಲ್ಲೂ ಮಂತ್ರಿಯಾಗುವ ಮೂಲಕ ಜಾರಕಿಹೊಳಿ ಮನೆತನದ ಪರಂಪರೆ ಮುಂದುವರಿಸಿದ್ದಾರೆ. ಸತೀಶ್ ಸಹೋದರ ಬಾಲಚಂದ್ರ ಜಾರಕಿಹೊಳಿ 2008-13ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪೌರಾಡಳಿತ ಮತ್ತು ಸಣ್ಣ ಉದ್ಯಮಗಳ ಇಲಾಖೆ ಸಚಿವರಾಗಿದ್ದರು.
ಮತ್ತೊರ್ವ ಸಹೋದರ ರಮೇಶ್ ಜಾರಕಿಹೊಳಿ 2016-17ರವರೆಗೆ ಸಿದ್ದರಾಮಯ್ಯ ಸಂಪುಟದಲ್ಲಿ ಸಣ್ಣ ಕೈಗಾರಿಕೆ ಹಾಗೂ 2018-19ರವರೆಗೆ ಸಹಕಾರ ಸಚಿವರಾಗಿದ್ದರು. ಬಳಿಕ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಕುಮಾರಸ್ವಾಮಿ ಸಂಪುಟದಲ್ಲಿ ಜೂನ್ 8, 2018 ರಿಂದ ಡಿಸೆಂಬರ್ 21, 2018ರವರೆಗೆ ಪೌರಾಡಳಿತ, ಬಂದರು ಮತ್ತು ಒಳನಾಡು ಜಲಸಾರಿಗೆ ಖಾತೆ ಸಚಿವರಾಗಿದ್ದರು. ನಂತರ ಬಿ.ಎಸ್. ಯಡಿಯೂರಪ್ಪ ಸಂಪುಟದಲ್ಲಿ ರಮೇಶ ಜಾರಕಿಹೊಳಿ ಫೆ.2020 ರಿಂದ ಮಾರ್ಚ್ 3, 2021ರವರೆಗೆ ಜಲಸಂಪನ್ಮೂಲ ಸಚಿವರಾಗಿದ್ದರು. ಬಳಿಕ ಸಿಡಿ ಪ್ರಕರಣದಿಂದಾಗಿ ರಮೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಸತೀಶ್ ಕಿರುಪರಿಚಯ: 1962 ಜೂನ್ 1ರಂದು ಕರದಂಟು ನಾಡು ಗೋಕಾಕ್ನಲ್ಲಿ ಲಕ್ಷ್ಮಣರಾವ್ ಮತ್ತು ಭೀಮವ್ವ ದಂಪತಿಗೆ ಜನಿಸಿದ ಸತೀಶ್ ಜಾರಕಿಹೊಳಿ ಗೋಕಾಕ್ ಸರ್ಕಾರಿ ಶಾಲೆಯಲ್ಲಿ ಎಸ್ಎಸ್ಎಲ್ಸಿ ಹಾಗೂ ಜೆಎಸ್ಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದಿದ್ದಾರೆ. ಪರಿಶಿಷ್ಟ ಪಂಗಡದ ವಾಲ್ಮೀಕಿ ಸಮುದಾಯಕ್ಕೆ ಸೇರಿರುವ ಸತೀಶ್ ಜಾರಕಿಹೊಳಿ ಹಿಂದುಳಿದ ವರ್ಗದ ಭರವಸೆಯ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಮೌಢ್ಯತೆಗೆ ಸೆಡ್ಡು ಹೊಡೆದು ಈ ಬಾರಿಯೂ ರಾಹು ಕಾಲದಲ್ಲೆ ನಾಮಪತ್ರ ಸಲ್ಲಿಸಿದ್ದ ಸತೀಶ ಜಾರಕಿಹೊಳಿ ಬಿಜೆಪಿಯ ಬಸವರಾಜ ಹುಂದ್ರಿ ವಿರುದ್ಧ 57,211 ಮತಗಳ ದಾಖಲೆ ಅಂತರದಲ್ಲಿ ಗೆದ್ದು ಬೀಗಿದ್ದರು. ಕಾಂಗ್ರೆಸ್ ಮೊದಲ ಪಟ್ಟಿಯಲ್ಲೆ ಸಚಿವರಾಗುವ ಮೂಲಕ ಸತೀಶ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ.
ಕೈ ತಪ್ಪಿದ ಡಿಸಿಎಂ ಸ್ಥಾನ:ಬೆಳಗಾವಿ ಜಿಲ್ಲೆಯಲ್ಲಿ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸತೀಶ್ ಜಾರಕಿಹೊಳಿ ರಾಜ್ಯದ ಬೇರೆ ಬೇರೆ ಕ್ಷೇತ್ರಗಳಲ್ಲೂ ಕೈ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. ಹೀಗಾಗಿ ಈ ಬಾರಿ ಡಿಸಿಎಂ ಸ್ಥಾನ ನೀಡುವಂತೆ ಅವರ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದರು. ಆದರೆ ಮೊದಲ ಪಟ್ಟಿಯಲ್ಲೆ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಸಚಿವರನ್ನಾಗಿ ಮಾಡಿದೆ.
ಇದನ್ನೂ ಓದಿ:ವಿಧಾನಸೌಧದ ಮೆಟ್ಟಿಲುಗಳಿಗೆ ತಲೆಬಾಗಿ ನಮಸ್ಕರಿಸಿದ ಡಿಸಿಎಂ ಶಿವಕುಮಾರ್..!