ಬೆಳಗಾವಿ :ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಸಚಿವ ಉಮೇಶ್ ಕತ್ತಿ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಯಿತು.
ಬೆಳಗಾವಿ ಡಿಸಿ ಕಚೇರಿಯ ವಿಡಿಯೋ ಕಾನ್ಫರೆನ್ಸ್ ಹಾಲ್ನಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಸಚಿವನಾಗಿ ನಾನು ಕೋವಿಡ್ ನಿಯಂತ್ರಣ ಸಂಬಂಧ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದೇನೆ. ನನ್ನ ಜಿಲ್ಲೆಯ ಜನರಿಗೆ ಕೊರೊನಾದಿಂದ ಯಾವುದೇ ತೊಂದರೆ ಆಗಬಾರದು.
ಸಾವು, ನೋವು ಸಂಭವಿಸದಂತೆ ಕ್ರಮವಹಿಸಬೇಕು. ಕೊರೊನಾ ಸಂಬಂಧ ಸರ್ಕಾರದ ಮಾರ್ಗಸೂಚಿಗಳನ್ನು ಜಾರಿಗೊಳಿಸುವಂತೆ ಸೂಚಿಸಿದ್ದೇನೆ ಎಂದರು. ಮಹಾರಾಷ್ಟ್ರ, ಗೋವಾ ಗಡಿಭಾಗಗಳ ಚೆಕ್ ಫೋಸ್ಟ್ಗಳಲ್ಲಿ ಪೊಲೀಸ್, ಟೀಚರ್ಸ್, ಅಂಗನವಾಡಿ ಕಾರ್ಯಕರ್ತರು ಸೇರಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಬೇಕು. ಮಾಹಿತಿ ಇಲ್ಲದೇ ಯಾರೂ ಗಡಿಪ್ರವೇಶ ಮಾಡದಂತೆ ಕ್ರಮವಹಿಸುವಂತೆ ಸೂಚಿಸಿದ್ದೇನೆ ಎಂದರು.
ನಿತ್ಯ ಜಿಲ್ಲೆಯಲ್ಲಿ 3 ಸಾವಿರ ಟೆಸ್ಟ್, 5 ಸಾವಿರ ಲಸಿಕೆ ನೀಡುತ್ತಿದ್ದೇವೆ. ಅಗತ್ಯ ಬಿದ್ರೆ ಇದರ ಪ್ರಮಾಣ ಹೆಚ್ಚಿಸಲಾಗುವುದು. ತಾಲೂಕು ಕೇಂದ್ರಗಳಲ್ಲಿ ವಾರ್ ರೂಂ ತೆರೆಯುವ ಅಗತ್ಯತೆ ಈಗಿಲ್ಲ. ಕೊರೊನಾ ನಿಯಂತ್ರಣಕ್ಕೆ ಬಾರದಿದ್ದರೆ ವಾರ್ ರೂಂ ನಿರ್ಮಿಸುತ್ತೇವೆ ಎಂದರು.