ಬೆಳಗಾವಿ: ಸುಸಜ್ಜಿತ ರಸ್ತೆ ಜೊತೆಗೆ ಸುರಕ್ಷಿತ ಪಾದಚಾರಿ ಮಾರ್ಗವೂ ಅತ್ಯವಶ್ಯಕ. ಸೂಕ್ತ ಮತ್ತು ಸುರಕ್ಷತಾ ಪಾದಚಾರಿ ಮಾರ್ಗಗಳಿಲ್ಲದಿದ್ದರೆ ಪಾದಚಾರಿಗಳು ಸಂಚರಿಸುವುದಾದರೂ ಹೇಗೆ ? ಕುಂದಾನಗರಿ ಬೆಳಗಾವಿ ಜಿಲ್ಲೆಯು ರಾಜ್ಯದಲ್ಲಿ ಅತಿವೇಗವಾಗಿ ಬೆಳೆಯುತ್ತಿದೆಯಾದರೂ ಇಲ್ಲಿ ಸುಸಜ್ಜಿತ ಪಾದಚಾರಿ ಮಾರ್ಗಗಳಿಲ್ಲ. ಜೊತೆಗೆ ರಸ್ತೆ ನಿಯಮಗಳನ್ನು ಉಲ್ಲಂಘಿಸುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ಪಾದಚಾರಿಗಳೇನಾದ್ರೂ ಜಾಗೃತಿ ತಪ್ಪಿದ್ರೆ ಇಲ್ಲಿ ಅಪಘಾತಕ್ಕೀಡಾಗಿ ಪ್ರಾಣವನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದು ಹಿಡಿಶಾಪ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
2020ರಲ್ಲಿ 25 ಪಾದಚಾರಿಗಳು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇನ್ನು 85ಕ್ಕೂ ಅಧಿಕ ಮಂದಿ ಅಪಘಾತಕ್ಕೀಡಾಗಿ ಗಾಯಗೊಂಡಿದ್ದಾರೆ. ಸುಸಜ್ಜಿತ ಪಾದಚಾರಿ ಮಾರ್ಗಗಳು ಇಲ್ಲದೇ ಇರುವುದು ಅಪಘಾತಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ.
ಸ್ಮಾರ್ಟ್‍ಸಿಟಿ ಯೋಜನೆ:
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸ್ಮಾರ್ಟ್‍ಸಿಟಿ ಯೋಜನೆಗೆ ಬೆಳಗಾವಿ ಮೊದಲನೇ ಹಂತದಲ್ಲೇ ಆಯ್ಕೆಯಾಗಿದೆ. ನಗರದ ಎಲ್ಲೆಡೆ ಸ್ಮಾರ್ಟ್‍ಸಿಟಿ ಕಾಮಗಾರಿಯು ತ್ವರಿತಗತಿಯಿಂದ ಸಾಗುತ್ತಿದೆ. ಸ್ಮಾರ್ಟ್‍ಸಿಟಿ ಯೋಜನೆಯಡಿ ನಗರದ ಪ್ರಮುಖ ರಸ್ತೆಯ ಬದಿಯಲ್ಲಿ ಪಾದಚಾರಿ ಮಾರ್ಗಗಳನ್ನು ನಿರ್ಮಿಸಲಾಗುತ್ತಿದ್ದು, ತ್ವರಿತಗತಿಯಲ್ಲಿ ಯೋಜನೆ ಪೂರ್ಣಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಸ್ಮಾರ್ಟ್‍ಸಿಟಿ ಯೋಜನೆಯ ಕಾಮಗಾರಿಯಿಂದ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು, ಇದು ಕೂಡ ಅಪಘಾತಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.
ರಸ್ತೆ ದಾಟುವಾಗ ಅಪಘಾತ:
ನಗರದಲ್ಲಿ ಸ್ಮಾರ್ಟ್‍ಸಿಟಿ ಕಾಮಗಾರಿ ನಡೆಯುತ್ತಿದ್ದು, ಬಹುತೇಕ ರಸ್ತೆಗಳನ್ನು ಒನ್‍ವೇ ಮಾಡಲಾಗಿದೆ. ಹೀಗಾಗಿ ರಸ್ತೆ ದಾಟುವಾಗ ಹಾಗೂ ಕ್ರಾಸ್ ಮಾಡುವಾಗ ಜನರು ಜಾಗೃತಿ ವಹಿಸಬೇಕಾದ ಅನಿವಾರ್ಯತೆ ಇದೆ. ಬೆಳಗಾವಿಯಲ್ಲಿ ಕಳೆದ ವರ್ಷ ಮೃತಪಟ್ಟ ಬಹುತೇಕರು ರಸ್ತೆ ದಾಟುವಾಗಲೇ ಅಪಘಾತಕ್ಕೀಡಾಗಿದ್ದಾರೆ. 20 ಪುರುಷರು ಹಾಗೂ ಐವರು ಮಹಿಳೆಯರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅಪಘಾತದಲ್ಲಿ 71 ಪುರುಷರು ಗಾಯಗೊಂಡಿದ್ದು, 14 ಮಹಿಳೆಯರು ಗಾಯಗೊಂಡಿದ್ದಾರೆ. ರಸ್ತೆ ಸುರಕ್ಷತೆ ಬಗ್ಗೆ ಸಂಚಾರ ಪೊಲೀಸರು ನಿರಂತರ ಜಾಗೃತಿ ಮೂಡಿಸುತ್ತಿದ್ದರೂ ನಗರದಲ್ಲಿ ಅಪಘಾತಗಳ ಪ್ರಮಾಣ ಮಾತ್ರ ನಿಂತಿಲ್ಲ. ಇನ್ನು ಹೆಲ್ಮೆಟ್ ಧರಿಸದೇ ವಾಹನ ಚಲಾವಣೆ ಮಾಡುವ ಸವಾರರೂ ಕೂಡ ಅಪಘಾತದಲ್ಲಿ ಮೃತಪಟ್ಟಿದ್ದಾರೆ.