ಚಿಕ್ಕೋಡಿ: ಜಿಲ್ಲೆಯಲ್ಲಿ ಒಂದು ಕಡೆ ಭೀಕರ ಪ್ರವಾಹದಿಂದ ಜನ ನಲುಗಿದ್ದಾರೆ. ಆದ್ರೆ ಕೆಲ ಅಧಿಕಾರಿಗಳ ನಿರ್ಲಕ್ಷ್ಯ ಮಾತ್ರ ಮುಂದುವರೆದಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಬೆಳಗಾವಿ ಜಿಲ್ಲಾ ಆಹಾರ ಇಲಾಖೆಯ ಉಪ ನಿರ್ದೇಶಕರೋರ್ವರು ನೂತನ ಸಚಿವರು ಕರೆದಿದ್ದ ಪ್ರವಾಹದ ಸಭೆಯಲ್ಲೇ ವಾಟ್ಸ್ಯಾಪ್ ಚಾಟಿಂಗ್ ಮಾಡುತ್ತಾ ಕಾಟಾಚಾರಕ್ಕೆ ಸಭೆಗೆ ಹಾಜರಾಗಿರುವಂತೆ ವರ್ತಿಸಿರುವ ವಿಡಿಯೋ ವೈರಲ್ ಆಗಿದೆ.
ಕಾಟಾಚಾರಕ್ಕೆ ಸಭೆಗೆ ಹಾಜರಾದ ಅಧಿಕಾರಿ... ವಾಟ್ಸ್ಯಾಪ್ ಚಾಟಿಂಗ್ನಲ್ಲಿ ಬ್ಯುಸಿ..!
ಅಧಿಕಾರಿಗಳ ನಿರ್ಲಕ್ಷ್ಯತನ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಜನರ ಸಮಸ್ಯೆಗೆ ಸ್ಪಂದಿಸದೆ ಕಾರ್ಯನಿರ್ವಹಣೆಯಲ್ಲಿ ಆಲಸ್ಯ ತೋರುವ ಅಧಿಕಾರಿಗಳ ಪಟ್ಟಿ ಏರುತ್ತಿದೆ. ಆ ಪಟ್ಟಿಗೆ ಈಗ ಮತ್ತೊಬ್ಬರು ಸೇರಿದದ್ದಾರೆ. ರಾಜ್ಯವೇ ಪ್ರವಾಹಕ್ಕೆ ತುತ್ತಾಗಿ ಬಳಲಿರುವಾಗ ಈ ಅಧಿಕಾರಿ ಮಾತ್ರ ವಾಟ್ಸ್ಯಾಪ್ನಲ್ಲಿ ಬ್ಯುಸಿಯಾಗಿದ್ದರು.
ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ ಸಭೆಯನ್ನ ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಯಡಿಯೂರಪ್ಪ ನೂತನ ಸಚಿವರಾದ ಲಕ್ಷ್ಮಣ್ ಸವದಿ ಹಾಗೂ ಶಶಿಕಲಾ ಜೊಲ್ಲೆ ಕರೆದಿದ್ದರು. ಆದ್ರೆ ಸಭೆಯಲ್ಲಿ ಜವಾಬ್ದಾರಿಯುತವಾಗಿ ವರ್ತಿಸಬೇಕಿದ್ದ ಆಹಾರ ಇಲಾಖೆಯ ಉಪ ನಿರ್ದೇಶಕಿ ಆಫ್ರಿನಾ ಬಾನು ಬಳ್ಳಾರಿ ಅವರು ಸಭೆಯಲ್ಲೇ ವಾಟ್ಸ್ಯಾಪ್ ಚಾಟಿಂಗ್ನಲ್ಲಿ ಬ್ಯುಸಿ ಆಗಿರುವ ದೃಶ್ಯಗಳು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿವೆ.
ಭೀಕರ ಪ್ರವಾಹ ಸಭೆಯಲ್ಲೂ ನಿರ್ಲಕ್ಷ್ಯ ತೋರಿರುವ ಅಧಿಕಾರಿ ವರ್ತನೆ ಸಾರ್ವಜನಿಕನರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಇದೇ ಅಧಿಕಾರಿ ಹುಕ್ಕೇರಿ ತಹಶಿಲ್ದಾರ್ ಆಗಿದ್ದ ವೇಳೆ ಆಗಸ್ಟ್ 15 ರಂದು ರಾಷ್ಟ್ರ ಧ್ವಜವನ್ನ ಉಲ್ಟಾ ಹಾರಿಸಿ ನಿರ್ಲಕ್ಷ್ಯ ತೋರಿದ್ದರು ಎನ್ನಲಾಗ್ತಿದೆ.