ಬೆಳಗಾವಿ: ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವ ಪ್ರವಾಹ ಸಂತ್ರಸ್ತರು ಕಟ್ಟಡವೊಂದರ ಮೇಲೆ ಸಂಗ್ರಹವಾದ ಮಳೆ ನೀರನ್ನೇ ಕುಡಿದು ಜೀವನ ಸಾಗಿಸುತ್ತಿದ್ದಾರೆ. ಈ ಮನಕಲಕುವ ದೃಶ್ಯ ಕಂಡುಬಂದಿದ್ದು, ಜಿಲ್ಲೆಯ ರಾಮದುರ್ಗ ತಾಲೂಕಿನ ಮಾರಡಗಿ ಗ್ರಾಮದಲ್ಲಿ.
ಪ್ರವಾಹಕ್ಕೆ ತತ್ತರಿಸಿರುವ ಬೆಳಗಾವಿ ಮಂದಿ: ಮಳೆ ನೀರನ್ನೇ ಕುಡಿಯುತ್ತಿರುವ ಸಂತ್ರಸ್ತರು..! - ಬೆಳಗಾವಿ ಮಳೆ ಲೇಟೆಸ್ಟ್ ನ್ಯೂಸ್
ಬೆಳಗಾವಿಯಲ್ಲಿ ಮಳೆಯ ಅಬ್ಬರಕ್ಕೆ ನಲುಗಿರುವ ಪ್ರವಾಹ ಸಂತ್ರಸ್ತರು ಕಟ್ಟಡವೊಂದರ ಮೇಲೆ ಸಂಗ್ರಹವಾದ ಮಳೆ ನೀರನ್ನೇ ಕುಡಿದು ಜೀವನ ಸಾಗಿಸುತ್ತಿದ್ದಾರೆ.
ಮಲಪ್ರಭಾ ನದಿ ಪ್ರವಾಹಕ್ಕೆ ಮಾರಡಗಿ ಗ್ರಾಮದ ನೆರೆಸಂತ್ರಸ್ತರು ಗುಡ್ಡದ ಮೇಲೆ ಸ್ಥಳಾಂತರಗೊಂಡಿದ್ದಾರೆ. ರಾಮದುರ್ಗ ತಾಲೂಕಿನ ಸುರೇಬಾನ್ ಗ್ರಾಮದ ಪಕ್ಕದಲ್ಲಿ ಸಂತ್ರಸ್ತರು ಶೆಡ್ನಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಕುಡಿಯುವ ನೀರಿನ ಅಭಾವ ಎದುರಾಗಿದ್ದು, ಮನೆಯೊಂದರ ಮೇಲೆ ಶೇಖರಣೆಯಾದ ಮಳೆ ನೀರನ್ನೇ ಸಂಗ್ರಹಿಸಿ ಕುಡಿಯುತ್ತಿದ್ದಾರೆ.
ಎರಡು ದಿನಗಳಿಂದ ಪರಿಹಾರ ಕೇಂದ್ರದಲ್ಲಿರುವ ನೆರೆ ಸಂತ್ರಸ್ತರು ಗುಡ್ಡದ ಮೇಲೆ ನೀರು ಸಿಗದಿದ್ದಕ್ಕೆ ಮಳೆಯಿಂದ ಶೇಖರಣೆಯಾದ ನೀರನ್ನೇ ಸೇವಿಸಿ ಬದುಕು ಸಾಗಿಸುತ್ತಿದ್ದಾರೆ. ನೆರೆ ಸಂತ್ರಸ್ತರ ಗೋಳು ಕೇಳುವವರೇ ಇಲ್ಲದಂತಾಗಿದೆ. ಇಷ್ಟಾದರೂ ಸ್ಥಳಕ್ಕೆ ಬಾರದ ಸ್ಥಳೀಯ ಶಾಸಕ ಮಹಾದೇವಪ್ಪ ಯಾದವಾಡ ಹಾಗೂ ಅಧಿಕಾರಿಗಳ ವಿರುದ್ಧ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.