ಅಥಣಿ: ನೆರೆ ಪರಿಹಾರ ಬಾರದ ಕಾರಣ ತಾಲೂಕಿನ ಹುಲಗಬಾಳ ಗ್ರಾಮದ ಮಾಂಗ ವಸತಿ ಗ್ರಾಮಸ್ಥರು ತಹಶೀಲ್ದಾರ್ ದುಂಡಪ್ಪ ಕೋಮಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಾರದ ನೆರೆ ಪರಿಹಾರ: ತಹಶೀಲ್ದಾರ್ ಹಾಗೂ ನೆರೆ ಸಂತ್ರಸ್ತರ ನಡುವೆ ಮಾತಿನ ಚಕಾಮಕಿ.. - outrage against Tahsildar
ಅಥಣಿ ತಾಲೂಕು ಆಡಳಿತ ಕಳೆದ ಬಾರಿ ನೆರೆ ಸಂತ್ರಸ್ತರ ಪರಿಹಾರ ಇನ್ನೂ ಬಿಡುಗಡೆ ಮಾಡಿಲ್ಲವೆಂದು ಆರೋಪಿಸಿ ಕೆಲವು ನೆರೆ ಸಂತ್ರಸ್ತರು ಮತ್ತು ತಹಶೀಲ್ದಾರ್ ದುಂಡಪ್ಪ ಕೋಮಾರ ನಡುವೆ ಮಾತಿನ ಜಟಾಪಟಿ ನಡೆಯಿತು.
ಕೃಷ್ಣಾ ನದಿ ಪ್ರವಾಹಕ್ಕೆ ಹುಲಗಬಾಳ ಮಾಂಗ ವಸತಿ ಪ್ರದೇಶವು ನಡುಗಡ್ಡೆಯಾಗಿದ್ದು ಕೆಲವು ಗ್ರಾಮಸ್ಥರು ಮುಂಜಾಗ್ರತಾ ಕ್ರಮವಾಗಿ ಸುರಕ್ಷಿತ ಪ್ರದೇಶಗಳಿಗೆ ತೆರಳಿದ್ದರು. ಇನ್ನು ಕೆಲವರು ಅಲ್ಲೇ ವಾಸವಾಗಿದ್ದರಿಂದ ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ, ಜನರನ್ನು ಮನವೊಲಿಸಿ ಕರೆದುಕೊಂಡು ಬರಲು ಮುಂದಾದಾಗ ನೆರೆ ಸಂತ್ರಸ್ತರು ಮತ್ತು ತಹಶೀಲ್ದಾರ್ ನಡುವೆ ಮಾತಿನ ಚಕಮಕಿ ನಡೆಯಿತು.
ತಾಲೂಕು ಆಡಳಿತ ಕಳೆದ ಬಾರಿ ನೆರೆ ಸಂತ್ರಸ್ತರ ಪರಿಹಾರ ಇನ್ನೂ ಬಿಡುಗಡೆ ಮಾಡಿಲ್ಲ. ಬೆಳೆಹಾನಿ ಮನೆ ಹಾನಿ ಸಂಭವಿಸಿದ್ದು, ಸಂಬಂಧ ಪಟ್ಟವರನ್ನು ಕೇಳಿದರೆ ನಮ್ಮ ಕಡೆ ಏನು ಇಲ್ಲ, ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಇದೆ ಎಂದು ಸಬೂಬು ನೀಡುತ್ತಿದ್ದಾರೆ. ಹಾಗಾಗಿ ಕಳೆದ ಬಾರಿಯ ಪ್ರವಾಹ ಪರಿಹಾರ ವಿತರಣೆ ಮಾಡಿದರೆ ಮಾತ್ರ ನಾವು ಸುರಕ್ಷಿತ ಸ್ಥಳಗಳಿಗೆ ಬರುತ್ತೇವೆ ಎಂದು ನೆರೆ ಸಂತ್ರಸ್ತರು ಪಟ್ಟು ಹಿಡಿದು ಅಲ್ಲೇ ವಾಸ ಮಾಡುತ್ತಿದ್ದಾರೆ.