ಅಥಣಿ :ಕೃಷ್ಣಾ ನದಿ ಪ್ರವಾಹ ಪೀಡಿತ ಸಂತ್ರಸ್ತರಿಗೆ ಪರಿಹಾರ ನೀಡದಿರುವುದುನ್ನು ಖಂಡಿಸಿ ತಾಲೂಕಿನ ಸತ್ತಿ ಗ್ರಾಮಸ್ಥರು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ತಹಶೀಲ್ದಾರ್ ಕಚೇರಿ ಎದುರು ಪ್ರವಾಹ ಸಂತ್ರಸ್ತರಿಂದ ಧರಣಿ.. ಸರ್ಕಾರದ ನಿರ್ದೇಶನದಂತೆ ಮನೆ ಸರ್ವೆ ಮಾಡಿದರೂ ತಾಲೂಕು ಆಡಳಿತದಿಂದ ಸರಿಯಾದ ರೀತಿಯಲ್ಲಿ ಪರಿಹಾರ ಬಂದಿಲ್ಲ. ಬೇಕಾಬಿಟ್ಟಿಯಾಗಿ ಹಲವರಿಗೆ ಪರಿಹಾರ ಬಂದಿದೆ. ನೆರೆಯಲ್ಲಿ ಮುಳುಗದೆ ಇರುವ ಮನೆಗಳಿಗೆ ಪರಿಹಾರ ಹಣ ಸಂದಾಯ ಆಗಿದೆ ಎಂದು ಸಂತ್ರಸ್ತರು ಆರೋಪಿಸಿದರು.
ಈ ವೇಳೆ ತಹಶೀಲ್ದಾರ್‌ರನ್ನೇ ತರಾಟೆ ತೆಗೆದುಕೊಂಡ ಮಹಿಳೆಯರು, ಮನೆ ಮುಳುಗಿ ನಾವು ಮರಗಳ ಕೆಳಗೆ ಜೀವನ ಸಾಗಿಸುತ್ತಿದ್ದೇವೆ. ಸರ್ಕಾರಿಂದ ಒಂದೇ ಒಂದು ರೂಪಾಯಿ ಪರಿಹಾರ ಬಂದಿಲ್ಲ. ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮುಳುಗಡೆಯಲ್ಲಿ 1140 ಮನೆಗಳು ಹಾನಿ ಸಂಭವಿಸಿವೆ ಎಂದು ಅಧಿಕಾರಿಗಳು ವರದಿ ನೀಡಿದರೂ ಕೇವಲ 190 ಮನೆಗಳಿಗೆ ಮಾತ್ರ ಪರಿಹಾರ ನೀಡಿದ್ದಾರೆ ಎಂದು ಅಳಲು ತೋಡಿಕೊಂಡರು.
ಬಳಿಕ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮಾತನಾಡಿ, ನೆರೆ ಸಂತ್ರಸ್ತರ ವಿಚಾರದಲ್ಲಿ ಸರ್ಕಾರ ಚೆಲ್ಲಾಟವಾಡುತ್ತಿದೆ. ಮುಖ್ಯಮಂತ್ರಿಗಳು ಅಥಣಿಗೆ ಬಂದ ಸಮಯದಲ್ಲಿ ನೆರೆ ಸಂತ್ರಸ್ತರ ಪರಿಹಾರ ಒಂದು ವಾರದಲ್ಲಿ ಬರುತ್ತೇ ಎಂದು ಹೇಳಿದ್ದರು. ಆರು ತಿಂಗಳಾದರೂ ಹಣ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ತಹಶೀಲ್ದಾರ್ ದುಂಡಪ್ಪ ಕೋಮಾರ, ನಾವು ಇನ್ನುಳಿದ ಮನೆಗಳ ಪರಿಹಾರಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ. ಮತ್ತೂಮ್ಮೆ ನಾವು ಪರಿಶೀಲನೆ ಮಾಡುವುದರ ಜೊತೆಗೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರುವಂತೆ ಮಾಡುತ್ತೇವೆ ಎಂದು ಭರವಸೆ ನೀಡಿದರು.