ಚಿಕ್ಕೋಡಿ: ಪ್ರವಾಹ ಪೀಡಿತ ನೆರೆ ಸಂತ್ರಸ್ತರಿಗೆ ಸಂಘ ಸಂಸ್ಥೆಗಳು, ದಾನಿಗಳು, ಹಾಸಿಗೆ, ಬಟ್ಟೆ, ಅಕ್ಕಿ ಮೂಟೆಗಳು, ಹೀಗೆ ದಿನ ಬಳಕೆ ಸಾಮಗ್ರಿಗಳನ್ನು ನೀಡಿ ನೆರವಾಗಿದ್ದಾರೆ. ಆದರೆ, ಸಂತ್ರಸ್ತರಿಗೆ ವಿತರಿಸಬೇಕಾದ ಈ ಸಾಮಗ್ರಿಗಳನ್ನು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಶಂಕರಟ್ಟಿ ಗ್ರಾಮ ಪಂಚಾಯತ್ ಪಿಡಿಓ ಹಾಗೂ ಅಧ್ಯಕ್ಷ ಸೇರಿ ಪಂಚಾಯತ್ ಕಾರ್ಯಾಲಯದಲ್ಲಿ ಸಂಗ್ರಹಿಸಿಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ನೆರೆ ಸಂತ್ರಸ್ತರಿಗೆ ಸಿಗದ ದಾನಿಗಳ ಸಾಮಗ್ರಿ: ಅಧಿಕಾರಿಗಳೇ ಮಾಡಿದ್ರಾ ಮೋಸ?! - ಅಧಿಕಾರಿಗಳೇ ಕರ್ತವ್ಯಲೋಪ
ರಾಜ್ಯಾದ್ಯಂತ ಪ್ರವಾಹ ಸೃಷ್ಟಿಯಾಗಿದ್ದರಿಂದ ನೆರೆ ಸಂತ್ರಸ್ತರಿಗೆ ಹಲವು ದಾನಿಗಳು ಮೂಲಭೂತ ಸೌಲಭ್ಯಗಳನ್ನು ನೀಡಿ ನೆರವಾಗಿದ್ದಾರೆ. ಆದರೆ ಇಂತಹ ವಸ್ತುಗಳನ್ನು ಜವಾಬ್ದಾರಿಯುತವಾಗಿ ತಲುಪಿಸಬೇಕಾದ ಅಧಿಕಾರಿಗಳೇ ಕರ್ತವ್ಯಲೋಪ ಎಸಗಿರುವ ಆರೋಪ ಅಥಣಿ ತಾಲೂಕಿನ ಶಂಕರಟ್ಟಿಯಲ್ಲಿ ಕೇಳಿಬಂದಿದೆ.
ಪಂಚಾಯತ್ ಕಾರ್ಯಾಲಯ ಮತ್ತು ಗಂಜಿ ಕೇಂದ್ರಗಳಲ್ಲಿ ಸಂಗ್ರಹಿಸಿಟ್ಟಿದ್ದ ಸಾಮಗ್ರಿಗಳನ್ನು ನಮಗೆ ಕೊಡಿ ಎಂದು ಸಂತ್ರಸ್ತರು ಕೇಳಿದಾಗ, ನೀವು ನಿಮ್ಮ ಮನೆಗಳಿಗೆ ತೆರಳುವ ಸಂದರ್ಭದಲ್ಲಿ ಕೊಡುತ್ತೇವೆ ಎಂದು ಪಂಚಾಯತ್ ಅದ್ಯಕ್ಷ ಪಿಡಿಓ ಹೇಳುತ್ತಿದ್ದಾರೆಂದು ಸಂತ್ರಸ್ತರು ಮಾಧ್ಯಮಗಳ ಮುಂದೆ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.
ಸರ್ಕಾರ ತಕ್ಷಣ ಪರಿಹಾರ ರೂಪದಲ್ಲಿ ಹತ್ತು ಸಾವಿರ ರೂಪಾಯಿ ಚೆಕ್ ವಿತರಿಸುವಂತೆ ಆದೇಶ ಮಾಡಿದರೂ, ಖವಟಗೊಪ್ಪ ಸಂತ್ರಸ್ತರಿಗೆ ಮಾತ್ರ ಸೌಲಭ್ಯ ಒದಗಿಸುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.