ಬೆಳಗಾವಿ :2019ರಲ್ಲಿ ಸಂಭವಿಸಿದ ಪ್ರವಾಹದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಇದರಿಂದ ಸಿಟ್ಟಿಗೆದ್ದ ಸಂತ್ರಸ್ತರು, ರೊಟ್ಟಿ-ಬುತ್ತಿ ಕಟ್ಟಿಕೊಂಡು ನಗರದ ಡಿಸಿ ಕಚೇರಿ ಮುಂದೆ ಧರಣಿ ನಡೆಸಿದರು.
ಕಳೆದ 2019ರಲ್ಲಿ ಗೋಕಾಕ್ ತಾಲೂಕಿನ ಅರಭಾವಿ ಮತಕ್ಷೇತ್ರದಲ್ಲಿ ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದ ಅಂದಾಜು 800ಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ಇದಾಗಿ 3 ವರ್ಷ ಕಳೆಯುತ್ತಾ ಬಂದರೂ ಈವರೆಗೂ ನೆರೆ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಮನೆ ಕಟ್ಟಿ ಕೊಟ್ಟಿಲ್ಲ.
ಗೋಕಾಕ್ ತಾಲೂಕಿನ ಅರಭಾವಿ ಮತಕ್ಷೇತ್ರದ ಅಡಿಬಟ್ಟಿ, ಚಿಗಡೊಳ್ಳಿ, ಮೇಳವಂಕಿ, ಹಡಗಿನಾಳ, ಉದಗಟ್ಟಿ, ತಿಗಡಿ, ಮಸಗುಪ್ಪಿ, ಕಲಾರಕೊಪ್ಪ, ಅಳ್ಳಿಮಟ್ಟಿ, ಸುಣಧೋಳಿ, ಢವಳೇಶ್ವರ, ಮುನ್ಯಾಳ, ಕಮಲದಿನ್ನಿ, ರಂಗಾಪುರ ಸೇರಿ ಘಟಪ್ರಭಾ ನದಿ ದಂಡೆಯ ಹಲವು ಹಳ್ಳಿಗಳಿಂದ ಆಗಮಿಸಿದ 500ಕ್ಕೂ ಹೆಚ್ಚು ಸಂತ್ರಸ್ತರು ನಗರದ ಡಿಸಿ ಕಚೇರಿವರೆಗೂ ಪ್ರತಿಭಟನಾ ರ್ಯಾಲಿ ನಡೆಸಿ ಧರಣಿ ನಡೆಸಿ ಪರಿಹಾರಕ್ಕೆ ಒತ್ತಾಯಸಿದರು.
ಈ ವೇಳೆ ಮಾತನಾಡಿದ ಸಂತ್ರಸ್ತರು, ಮನೆ ಕಳೆದುಕೊಂಡು ಮೂರು ವರ್ಷಗಳೇ ಕಳೆದಿದೆ. ಸಂಬಂಧಿಸಿದ ಅಧಿಕಾರಿಗಳು ಈವರೆಗೂ ಪರಿಹಾರ ಕೊಟ್ಟಿಲ್ಲ. ತಮಗೆ ಬೇಕಾದವರಿಗೆ ಮನೆ ಹಾಕಿ ಕೊಡುತ್ತಿದ್ದಾರೆ.