ಅಥಣಿ: ಕೃಷ್ಣಾ ನದಿ ಪ್ರವಾಹ ಪೀಡಿತರ ಪರ ಧ್ವನಿ ಎತ್ತಿರುವ ಕಾಂಗ್ರೆಸ್ ಮುಖಂಡರಿಂದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನೈಜ ಫಲಾನುಭವಿಗಳು ಅವಕಾಶ ವಂಚಿತರಾಗಿದ್ದು, ಕೂಡಲೇ ಪರಿಹಾರ ಒದಗಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ನೆರೆ ಸಂತ್ರಸ್ತರಿಗೆ ಆದಷ್ಟು ಬೇಗ ಪರಿಹಾರ ಕೊಡಿ: ಗಜಾನನ ಮಂಗಸೂಳಿ - ಅಥಣಿ ಪಟ್ಟನದಲ್ಲಿ ಕಾಂಗ್ರೆಸ್ ಮುಖಂಡ
ನೈಜ ನೆರೆ ಸಂತ್ರಸ್ತ ಫಲಾನುಭವಿಗಳು ಅವಕಾಶ ವಂಚಿತರಾಗಿದ್ದು, ಕೂಡಲೇ ಪರಿಹಾರ ಒದಗಿಸದಿದ್ದರೆ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗುವದು ಎಂದು ಅಥಣಿ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಅಥಣಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಮಾವೇಶಗೊಂಡ ಕಾಂಗ್ರೆಸ್ ಮುಖಂಡರು ಪತ್ರಿಕಾಗೋಷ್ಠಿ ನಡೆಸಿದ್ದು, ನೊಂದವರ ಕಣ್ಣೀರು ಒರೆಸಲು ಮುಂದಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಇಪ್ಪತ್ತಕ್ಕೂ ಹೆಚ್ಚು ಗ್ರಾಮಗಳು ಕೃಷ್ಣಾ ನದಿಯ ಪ್ರವಾಹದಿಂದ ಬಾಧಿತವಾಗಿದ್ದು, ಎರಡು ಬಾರಿ ಪ್ರವಾಹ ಸ್ಥಿತಿ ನಿರ್ಮಾಣವಾಗಿ ಸಾವಿರಾರು ಹೆಕ್ಟೇರ್ ಬೆಳೆ ಹಾನಿಯಾಗಿದೆ. ಸರ್ಕಾರ ಇದುವರೆಗೂ ಬೆಳೆಹಾನಿ ಪರಿಹಾರ ಕೊಟ್ಟಿಲ್ಲ. ಇದರಿಂದಾಗಿ ರೈತರು ಕಂಗಾಲಾಗಿದ್ದಾರೆ. ಎರಡು ಸಾವಿರದ ಒಂದು ನೂರಕ್ಕೂ ಹೆಚ್ಚು ತಾತ್ಕಾಲಿಕ ಮನೆಗಳನ್ನು ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಗುರುತಿಸಿ ಪ್ರವಾಹ ಪೀಡಿತರಿಗೆ ನ್ಯಾಯ ಒದಗಿಸಬೇಕು.
ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ಪ್ರವಾಹ ಸಂತ್ರಸ್ತರಿಗೆ ಐದು ಸಾವಿರ ಹಣ ನೀಡುವ ಭರವಸೆಯನ್ನು ಮಾತ್ರ ನೀಡಲಾಗಿದೆ. ಹಲವರಿಗೆ ಹಣ ಬರುತ್ತಿಲ್ಲ. ಅಷ್ಟೇ ಅಲ್ಲದೆ ಮನೆಗಳ ನಿರ್ಮಾಣಕ್ಕಾಗಿ ಅರ್ಧದಷ್ಟು ಹಣ ಸಂದಾಯ ಮಾಡಿದ್ದು, ಬಹುತೇಕ ನೈಜ ಫಲಾನುಭವಿಗಳು ಅವಕಾಶ ವಂಚಿತರಾಗಿದ್ದಾರೆ. ಅಂತಹವರಿಗೆ ಕೂಡಲೇ ಪರಿಹಾರ ಒದಗಿಸದಿದ್ದರೆ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಹೇಳಿದ್ದಾರೆ.