ಬೆಳಗಾವಿ: ರಾಮದುರ್ಗ ತಾಲೂಕಿನ ತುರನೂರ ಅರಿಬೆಂಚಿ ರಸ್ತೆಯಲ್ಲಿ, ಇನ್ನೋವಾ ಕಾರಿನಲ್ಲಿ (KA05 NG4775 ) ಸಾಗಿಸುತ್ತಿದ್ದ, ದಾಖಲೆಯಿಲ್ಲದ 1.53 ಕೋಟಿ ರೂ. ಖಚಿತ ಮಾಹಿತಿ ಮೇರೆಗೆ ಫ್ಲೈಯಿಂಗ್ ಸ್ಕಾಡ್ ತಂಡವು ದಾಳಿ ಮಾಡಿ ವಶಪಡಿಸಿಕೊಂಡಿದೆ. ಹಣ ಸಾಗಿಸುತ್ತಿದ್ದ ಬೆಂಗಳೂರಿನ ನಾಗರಭಾವಿಯ ಆರೋಪಿ ಚಂದ್ರಶೇಖರಯ್ಯ, ಕಾರು ಚಾಲಕ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಬೆನಕನಹಳ್ಳಿ ಗ್ರಾಮದ ಕರಿಬಸವರಾಜರ ಬಂಧಿತರು. ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಈ ವರೆಗೂ 200 ಕೋಟಿ ರೂ. ಮೌಲ್ಯದ ವಸ್ತುಗಳ ಜಪ್ತಿ:ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾದ ನಂತರದಿಂದ ಈವರೆಗೂ ನಗದು, ಮದ್ಯ ಸೇರಿ ವಶಪಡಿಸಿಕೊಂಡಿರುವ ವಸ್ತುಗಳ ಮೊತ್ತ 200 ಕೋಟಿ ರೂ. ದಾಟಿದೆ. ಈ ಬಾರಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಪ್ರಕರಣಗಳು ಹೆಚ್ಚಾಗಿ ದಾಖಲಾಗಿವೆ. ಸ್ಥಿರ ಕಣ್ಗಾವಲು ತಂಡ, ವಿಚಕ್ಷಣಾ ದಳ, ಪೊಲೀಸ್ ಅಧಿಕಾರಿಗಳು, ಐಟಿ, ಈವರೆಗೂ ಒಟ್ಟು 76.70 ಕೋಟಿ ನಗದು ವಶಕ್ಕೆ ಪಡೆದಿದ್ದರೆ, 19.59 ಮೌಲ್ಯದ ಕೊಡುಗೆ ನೀಡಲು ತಂದಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. 42.82 ಕೋಟಿ ರೂ. ಮೌಲ್ಯದ 10 ಲಕ್ಷ ಲೀಟರ್ ಮದ್ಯವನ್ನು ಜಪ್ತಿ ಮಾಡಿದ್ದರೆ, 15.25 ಕೋಟಿ ಮೌಲ್ಯದ ಡ್ರಗ್ಸ್ಅನ್ನು ವಶಕ್ಕೆ ಪಡೆಯಲಾಗಿದೆ. 45.81 ಕೋಟಿ ಮೌಲ್ಯದ 95.77 ಕೆ.ಜಿ ಬಂಗಾರ, 3.89 ಕೋಟಿ ರೂ. ಮೌಲ್ಯದ 561 ಕೆ.ಜಿ. ಬೆಳ್ಳಿಯನ್ನು ಜಪ್ತಿ ಮಾಡಲಾಗಿದೆ. ಒಟ್ಟು 1,629 ಪ್ರಥಮ ತನಿಖಾ ವರದಿಗಳು(FIR) ದಾಖಲಾಗಿವೆ.