ಚಿಕ್ಕೋಡಿ :ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಮನುಷ್ಯರಷ್ಟೇ ಅಲ್ಲ ಜಲಚರ,ಪ್ರಾಣಿಗಳಿಗೂ ಬರಗಾಲದ ಬಿಸಿ ತಟ್ಟಿದ್ದು ಕೃಷ್ಣಾ ನದಿಯಲ್ಲಿ ನೀರಿಲ್ಲದೆ ಮೀನುಗಳು ಸಾವನ್ನಪ್ಪಿವೆ.
ಬೆಳಗಾವಿ ಜಿಲ್ಲೆಯ ಅಥಣಿ, ಕಾಗವಾಡ, ರಾಯಬಾಗ ಹಾಗೂ ಚಿಕ್ಕೋಡಿ ತಾಲೂಕುಗಳ ವ್ಯಾಪ್ತಿಯ ಕೃಷ್ಣಾ ನದಿಯಲ್ಲಿ ಸತ್ತ ಮೀನುಗಳ ರಾಶಿಗಳು ಕಂಡುಬರುತ್ತಿವೆ. ಹೆಜ್ಜೆ ಇಟ್ಟಲ್ಲೆಲ್ಲ ಮೀನುಗಳ ಮೇಲೆಯೇ ನಡೆದು ಹೋಗಬೇಕಾಗಿದೆ. ಅಲ್ಲದೇ ಸುತ್ತಮುತ್ತಲು ದುರ್ವಾಸನೆ ಹರಡಿದೆ.
ಈಗಾಗಲೇ ಜನ-ಜಾನುವಾರುಗಳಿಗೆ ನೀರಿನ ತತ್ವಾರ ಉಂಟಾಗಿದೆ. ಹನಿ ನೀರಿಗೂ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂಥ ಹೊತ್ತಿನಲ್ಲಿ ಈ ಭಾಗದ ಜನ ನದಿಯಲ್ಲಿ ಹೊಂಡ ತೋಡಿ ಸಿಗುವ ನೀರನ್ನೇ ಸೋಸಿ ಕುಡಿಯಲು ಬಳಸುತ್ತಿದ್ದಾರೆ. ಆದರೆ, ಈಗ ಮೀನುಗಳು ಸತ್ತು ಬೀಳುತ್ತಿರುವುದರಿಂದ ಸಿಗುವ ಅಲ್ಪಸ್ವಲ್ಪ ನೀರು ದುರ್ವಾಸನೆಯಿಂದ ಕೂಡಿ ಕುಡಿಯಲು ಬಾರದಂತಾಗಿದೆ.
ಭೀಕರ ಬರಗಾಲಕ್ಕೆ ಜಲಚರಗಳ ಮಾರಣಹೋಮ ಕೃಷ್ಣಾ ನದಿ ತೀರದಲ್ಲಿ 40 ವರ್ಷಗಳಿಂದಲೂ ನೀರಿನ ಸಮಸ್ಯೆ ಇದೆ. ಅಂದಿನಿಂದ ಈವರೆಗೆ ನದಿ ಬತ್ತಿಹೋದ ವಾರದೊಳಗೆ ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಹರಿಸಲಾಗುತ್ತಿತ್ತು. ಆದರೆ, ಈಗ ಸತತ ಎರಡು ತಿಂಗಳಾದರೂ ನೀರು ಬರದೇ ಜನ ಕಂಗಾಲಾಗಿದ್ದಾರೆ. ಸರಕಾರ ನೀರು ಬಿಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳುತ್ತಿದೆ. ಈ ಭಾಗದ ಜನಪ್ರತಿನಿಧಿಗಳೂ ಮಹಾರಾಷ್ಟ್ರ ಸರಕಾರದ ಜತೆ ಮಾತಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ, ನೀರು ಮಾತ್ರ ಬರುವ ಲಕ್ಷಣ ಮಾತ್ರ ಕಾಣಿಸುತ್ತಿಲ್ಲ.
ಮೊಸಳೆಗಳ ಭಯ :
ಕೃಷ್ಣಾನದಿಯಲ್ಲಿ ಮೊಸಳೆಗಳಿರುವ ಕಾರಣ ಗ್ರಾಮಸ್ಥರು ನದಿಗೆ ಹೋಗಲು ಭಯ ಪಡುವಂತಾಗಿದ್ದು, ಒಬ್ಬೊಬ್ಬರೆ ನೀರಿಗೆ ಹೋಗುವ ಬದುಲು 8 ರಿಂದ 10 ಜನ ಒಟ್ಟಾಗಿ ನೀರು ತುಂಬಿಕೊಂಡು ಬರಬೇಕು. ಮಕ್ಕಳನ್ನು ನದಿಗೆ ಕಳುಹಿಸಲು ಪೋಷಕರು ಆತಂಕ ಪಡುತ್ತಿದ್ದಾರೆ. ಈ ಮೊದಲು ಹಲವು ಬಾರಿ ಜಾನುವಾರುಗಳು ಮೊಸಳೆ ಬಾಯಿಗೆ ಸಿಕ್ಕು ಗಾಯಗೊಂಡಿದ್ದುಂಟು ಎಂದು ಗ್ರಾಮಸ್ಥರು ಹೇಳುತ್ತಾರೆ.
ಈ ವರ್ಷದಲ್ಲಿ ಕಾಗವಾಡ, ಅಥಣಿ, ರಾಯಬಾಗ ತಾಲೂಕಿನ ಸುತ್ತಮುತ್ತ ಆರೇಳು ಮೊಸಳೆಗಳು ಆಹಾರ ಅರಸಿ ಊರೊಳಗೆ ಬಂದ ಉದಾಹರಣೆಗಳೂ ಇವೆ. ಮೊಸಳೆಗಳನ್ನು ಸುರಕ್ಷಿತವಾಗಿ ಅರಣ್ಯ ಇಲಾಖೆ ನೀರಿಗೆ ಬಿಟ್ಟಿದ್ದಾರೆ. ರಾತ್ರಿ ಹೊತ್ತು ಒಬ್ಬರೆ ಗದ್ದೆಗಳಿಗೆ ಹೋಗಿ ನೀರು ಹಾಯಿಸಬೇಕಾದರೆ ತೊಂದರೆಯಾಗುತ್ತಿದೆ ಎಂದು ಈ ಭಾಗದ ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.