ಬೆಳಗಾವಿ :ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷನ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣ ಸಂಬಂಧ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಬೆಳಗಾವಿ ನಗರ ಪೊಲೀಸರು ಮೂವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಘಟನೆ ನಡೆದ 18 ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಬೆಳಗಾವಿ ನಿವಾಸಿ ಅಭಿಜಿತ್ ಭಾತ್ಕಾಂಡೆ, ಬಸ್ತವಾಡ ಗ್ರಾಮದ ನಿವಾಸಿ ರಾಹುಲ್ ಕೊಡಚವಾಡ, ಜ್ಯೋತಿಬಾ ಗಂಗಾರಾ ಎಂದು ಗುರುತಿಸಲಾಗಿದೆ.
ಪ್ರಕರಣ ಹಿನ್ನೆಲೆ.. ಶನಿವಾರ ಸಂಜೆ ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತಕರ್ ಮೇಲೆ ದುಷ್ಕರ್ಮಿಗಳು ಫೈರಿಂಗ್ ಮಾಡಿದ್ದರು. ಆರೋಪಿಗಳನ್ನು ಬಂಧಿಸಲು ಪೊಲೀಸ್ ಕಮಿಷನರ್ ಬೋರಲಿಂಗಯ್ಯ ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಡಿಸಿಪಿ ರವೀಂದ್ರ ಗಡಾದಿ ನೇತೃತ್ವದ ತಂಡದಿಂದ ಆರೋಪಿಗಳನ್ನು ಬಂಧಿಸಲಾಗಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಯ, ಹಣಕಾಸಿನ ವ್ಯವಹಾರ, ವೈಯಕ್ತಿಕ ದ್ವೇಷ ಹಿನ್ನೆಲೆ ಘಟನೆ ನಡೆದಿದೆ. ಶನಿವಾರ ಸಂಜೆ 7.30 ಸುಮಾರಿಗೆ ಹಿಂಡಲಗಾ ಬಳಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತಕರ್ ಸಂಗಡಿಗರು ವಾಹನದಲ್ಲಿ ಹೋಗುತ್ತಿದ್ದರು. ಈ ವೇಳೆ ದ್ವಿಚಕ್ರವಾಹನದಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಫೈರಿಂಗ್ ಮಾಡಿದ್ದರು. ಈ ಸಂದರ್ಭದಲ್ಲಿ ರವಿ ಕೋಕತ್ಕರ್ ಗಾಯಗೊಂಡಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದರು.
ಹಳೆ ವೈಷಮ್ಯ ಹಿನ್ನೆಲೆ ಗುಂಡಿನ ದಾಳಿ : ಪ್ರಮುಖ ಆರೋಪಿ ಅಭಿಜಿತ್ ಹಾಗೂ ರವಿ ಕೋಕಿತಕರ್ ಮಧ್ಯೆ ರಿಯಲ್ ಎಸ್ಟೇಟ್ ವ್ಯವಹಾರ ಇತ್ತು. 2020ರ ಜನವರಿ 1ರಂದು ಆರೋಪಿ ಅಭಿಜಿತ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಈ ಪ್ರಕರಣದಲ್ಲಿ ಗಾಯಾಳು ರವಿ ಕೋಕಿತಕರ್ ಪ್ರಮುಖ ಆರೋಪಿಯಾಗಿದ್ದ. ಹಣಕಾಸಿನ ವ್ಯವಹಾರ ಹಳೆಯ ವೈಷಮ್ಯ ಹಿನ್ನೆಲೆ ಈ ಘಟನೆ ನಡೆದಿದೆ ಎಂದು ಅವರು ಮಾಹಿತಿ ನೀಡಿದರು. ಫೈರ್ ಆರ್ಮ್ ಬಳಸಿದ್ದು ಗಂಭೀರ ಅಪರಾಧವಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಅಭಿಜಿತ್ ಭಾತ್ಕಾಂಡೆ ಗುಂಡಿನ ದಾಳಿ ನಡೆಸಿದ್ದರು. ಕಂಟ್ರಿ ಪಿಸ್ತೂಲ್ ಬಳಸಿ ಫೈರ್ ಮಾಡಿದ್ದಾರೆ, ಇದಕ್ಕೆ ಯಾವುದೇ ಲೈಸೆನ್ಸ್ ಇಲ್ಲ. ಜನರು ಯಾವುದೇ ವದಂತಿ, ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಯ ಹೇಳಿದರು.