ಚಿಕ್ಕೋಡಿ:ಎರಡು ತಿಂಗಳ ಬಾಡಿಗೆ ನೀಡಿಲ್ಲ ಎಂಬ ಕಾರಣಕ್ಕೆ ಮನೆ ಮಾಲೀಕನು ಬಾಡಿಗೆದಾರರ ಮೇಲೆ ಫೈರಿಂಗ್ ಮಾಡಲು ಮುಂದಾದ ಘಟನೆ ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಬಿ.ಕೆ.ಕಾಲೇಜ್ ಬಳಿಯ ವಿದ್ಯಾಗಿರಿ ನಗರದಲ್ಲಿ ಮನೆ ಮಾಲೀಕ ತನ್ನ ಡಬಲ್ ಬ್ಯಾರಲ್ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಮನೆ ಮಾಲೀಕ ನೂರ್ ಅಹಮ್ಮದ ಶಾಪುರಕರ ಗಾಳಿಯಲ್ಲಿ ಗುಂಡು ಹಾರಿಸಿರುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕಳೆದ 8 ತಿಂಗಳಿನಿಂದ ನೂರ್ ಮಹಮ್ಮದ ಮನೆಯಲ್ಲಿ ಬಾಡಿಗೆ ಇದ್ದ ಶ್ರೀಮಂತ ದೀಕ್ಷಿತ ಕುಟುಂಬಸ್ಥರು ಲಾಕ್‌ಡೌನ್ ಹಿನ್ನೆಲೆ ಎರಡು ತಿಂಗಳ ಬಾಡಿಗೆ ಹಣ ನೀಡಲು ಆಗಿರಲಿಲ್ಲ. ಮನೆಗೆ ಅಡ್ವಾನ್ಸ್ ನೀಡಿದ್ದ 10 ಸಾವಿರ ರೂಪಾಯಿ ಹಣದಲ್ಲೇ ಬಾಡಿಗೆ ತೆಗೆದುಕೊಂಡ ಮಾಲೀಕ, ಉಳಿದ ಎರಡೂವರೆ ಸಾವಿರ ಬಾಡಿಗೆ ಹಣ ಕೊಟ್ಟು ಮನೆ ಖಾಲಿ ಮಾಡುವಂತೆ ಧಮ್ಕಿ ಹಾಕಿದ್ದಾನೆ ಎಂದು ಬಾಡಿಗೆದಾರರು ಆರೋಪಿಸಿದ್ದಾರೆ.
ಮುಂದಿನ ತಿಂಗಳು ಬಾಡಿಗೆ ಕೊಡುತ್ತೇನೆ ಅಂದಿದ್ದಕ್ಕೆ ಜೀವ ನೂರ್ ಮಹಮ್ಮದ ಬೆದರಿಕೆ ಹಾಕಿದ್ದಲ್ಲದೆ, ಮನೆಯ ಮುಂಭಾಗದಲ್ಲಿ ನಿಂತು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್ ಯಾರಿಗೂ ಗುಂಡು ತಗುಲದೇ ಅದು ಮನೆಯ ಛಾವಣಿಗೆ ತಾಗಿದೆ.
ಜೀವ ಭಯದಿಂದ ಶ್ರೀಮಂತ ದೀಕ್ಷಿತ್ ಹಾಗೂ ಕುಟುಂಬಸ್ಥರು ಪೊಲೀಸ್ ಠಾಣೆಗೆ ತೆರಳಿದ್ದಾರೆ. ವಿಷಯ ತಿಳಿದು ನೂರ್ ಅಹಮ್ಮದ್‌ನನ್ನ ವಶಕ್ಕೆ ಪಡೆದ ಪೊಲೀಸರು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.