ಬೆಳಗಾವಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಎನ್‌ಐಎ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿದ್ದಾರೆ. ಜಯೇಶ್ ಪೂಜಾರಿ ಎಂಬ ಆರೋಪಿ ಕೊಲೆ ಪ್ರಕರಣವೊಂದರಲ್ಲಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಬಂಧಿಯಾಗಿದ್ದ. ಮೊದಲಿಗೆ ಜ.14ರಂದು ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಸಚಿವರ ಕಚೇರಿಗೆ ಕರೆ ಮಾಡಿ ನಿತಿನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಹಾಕುವುದರ ಜೊತೆಗೆ 10 ಕೋಟಿ ರೂ. ಹಣಕ್ಕೆ ಬೇಡಿಕೆ ಹಾಕಿದ್ದ.
ಇದಾದ ಬಳಿಕ ಮಾರ್ಚ್ 21ರಂದು ಮತ್ತೆ ನಾಗ್ಪುರದಲ್ಲಿರುವ ಸಚಿವರ ಕಚೇರಿಗೆ ಕರೆ ಮಾಡಿ ನಿತಿನ್ ಗಡ್ಕರಿಯವರಿಗೆ ಜೀವ ಬೆದರಿಕೆ ಹಾಕಿದ್ದ. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದಾಗ ಬೆಳಗಾವಿ ಹಿಂಡಲಗಾ ಜೈಲಿನ ಕೈದಿಯು ಸಚಿವ ನಿತಿನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಹಾಕಿದ್ದು ಬಹಿರಂಗವಾಗಿತ್ತು.
ಇನ್ನು, ಆರೋಪಿ ಜಯೇಶ ತಾನು ದಾವೂದ್ ಇಬ್ರಾಹಿಂ ಗ್ಯಾಂಗ್‌ನ ಸದಸ್ಯ ಎಂದು ನಿತಿನ್ ಗಡ್ಕರಿಯವರಿಗೆ ಕೊಲೆ ಬೆದರಿಕೆ ಹಾಕಿದ್ದ. ಆ ಹಿನ್ನೆಲೆಯಲ್ಲಿ ಎನ್‌ಐಎ ಅಧಿಕಾರಿಗಳು ಈತನ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಪ್ರಾರಂಭಿಸಿದ್ದಾರೆ. ಅಲ್ಲದೇ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಎಫ್‌ಐಆರ್ ಮಾಹಿತಿ ರವಾನಿಸಿದ್ದಾಗಿ ಉನ್ನತ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಕೊಲೆ ಬೆದರಿಕೆ: ತನ್ನ ಗೆಳತಿಯ ತಂದೆಯ ಫೋನ್ ನಂಬರ್ನಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಕೊಲೆ ಬೆದರಿಕೆ ಹಾಕಿದ್ದ ಪ್ರಕರಣ ಕಳೆದ ತಿಂಗಳು ನಡೆದಿತ್ತು. ಈ ಆರೋಪದ ಮೇರೆಗೆ 19 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಅಮೀನ್ ಬಂಧಿತ ಯುವಕ, ಈತ ಪೊಲೀಸ್ ತುರ್ತು ಸಂಖ್ಯೆ 112 ಕ್ಕೆ ಕರೆ ಮಾಡುವ ಮೂಲಕ ಯೋಗಿ ಆದಿತ್ಯನಾಥ್‌ಗೆ ಕೊಲೆ ಬೆದರಿಕೆ ಹಾಕಿದ್ದ. ಆರೋಪಿಯನ್ನು ಕಾನ್ಪುರದ ಬೇಗಂ ಪೂರ್ವಾ ಪ್ರದೇಶದಲ್ಲಿ ಬಂಧಿಸಿದ್ದರು. ಜೊತೆಗೆ ಕರೆ ಮಾಡಲು ಬಳಸಿದ್ದ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ (ದಕ್ಷಿಣ) ಅಂಕಿತಾ ಶರ್ಮಾ ತಿಳಿಸಿದ್ದರು.
ಈ ಕುರಿತು ಹೆಚ್ಚಿನ ಮಾಹಿತಿಯನ್ನು ಸಹಾಯಕ ಪೊಲೀಸ್ ಕಮಿಷನರ್ ಸಂತೋಷ್ ಕುಮಾರ್ ಸಿಂಗ್ ನೀಡಿದ್ದು, ಅಮೀನ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ, ಯುವತಿಯ ತಂದೆ ಇವರಿಬ್ಬರ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಹತಾಶನಾದ ಬಳಿಕ ಆರೋಪಿಯು ಈ ಸಂಚು ರೂಪಿಸಿದ್ದ. ಪೊಲೀಸರು ಮಹಿಳೆಯ ತಂದೆ ಇ-ರಿಕ್ಷಾ ಚಾಲಕನನ್ನು ಸಂಪರ್ಕಿಸಿದಾಗ ಸುಮಾರು 10 ದಿನಗಳ ಹಿಂದೆ ತನ್ನ ಮೊಬೈಲ್ ಫೋನ್ ಯಾರೋ ಕದ್ದಿರುವುದಾಗಿ ಹೇಳಿದ್ದರು. ಬಳಿಕ, ಅಮೀನ್ ನೆರೆಹೊರೆಯ ಮನೆಯವರನ್ನು ವಿಚಾರಿಸಿದಾಗ ಆರೋಪಿಯು "ಯುವತಿಯು ಮದುವೆಯಾಗಲು ಬಯಸಿದ್ದರಿಂದ ಆಕೆಯ ತಂದೆಯನ್ನು ಬಲೆಗೆ ಬೀಳಿಸಲು ಸಂಚು ರೂಪಿಸಿರುವ" ಬಗ್ಗೆ ಬಾಯ್ಬಿಟ್ಟಿದ್ದಾನೆ ಎಂದು ಶರ್ಮಾ ಮಾಹಿತಿ ನೀಡಿದ್ದರು.
ಇದನ್ನೂ ಓದಿ:ವರ್ಷದಿಂದ ಕಾರವಾರ ನೌಕಾನೆಲೆ ನೌಕರ ನಾಪತ್ತೆ: ಪತಿ ಹುಡುಕಿಕೊಡುವಂತೆ ಜಿಲ್ಲಾಡಳಿತದ ಮೊರೆ ಹೋದ ಪತ್ನಿ