ಬೆಳಗಾವಿ: ಮಹಾರಾಷ್ಟ್ರ ಬಸ್ಗಳ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣದ 12 ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ಬೆಳಗಾವಿ ನಗರದಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಆದ್ರೆ, ಪೊಲೀಸ್ ಇಲಾಖೆಯು ನಾರಾಯಣಗೌಡ ಸೇರಿದಂತೆ ಕಾರ್ಯಕರ್ತರನ್ನು ಹಿರೇಬಾಗೆವಾಡಿ ಟೋಲ್ ನಾಕಾ ಬಳಿ ತಡೆದು ಬೆಳಗಾವಿ ನಗರ ಪ್ರವೇಶಕ್ಕೆ ಅವಕಾಶ ನೀಡಿರಲಿಲ್ಲ. ಈ ವೇಳೆ ಕೆಲ ಕಾರ್ಯಕರ್ತರು ಮಹಾರಾಷ್ಟ್ರ ಬಸ್ಗಳ ಮೇಲೆ ಕಲ್ಲು ತೂರಾಡಿದ್ದರು ಎನ್ನಲಾಗ್ತಿದೆ. ಇದಾದ ಬಳಿಕ ಪರಿಸ್ಥಿತಿ ಹದಗೆಡುತ್ತಿದ್ದಂತೆ ನೂರಾರು ಕರವೇ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಇದೀಗ ಹಿರೇಬಾಗೆವಾಡಿ ಪೊಲೀಸ್ ಠಾಣೆಯಲ್ಲಿ 12 ಕರವೇ ಕಾರ್ಯಕರ್ತರ ವಿರುದ್ಧ ಸ್ವಯಂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಐಪಿಸಿ ಸೆಕ್ಷನ್ 143, 147, 341, 427, 149 ಅಡಿ ಗುಂಪು ಕಟ್ಟಿಕೊಂಡು ಗಲಾಟೆ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿದೆ.