ಬೆಳಗಾವಿ: ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಉಗಿಯುತ್ತಿದ್ದ ಹಾಗೂ ಮಾಸ್ಕ್ ಹಾಕದೆ ಓಡಾಡುತ್ತಿದ್ದ ಜನರಿಗೆ 100-1000 ರೂ. ವರೆಗೆ ದಂಡ ಹಾಕುವ ಮೂಲಕ ಕುಂದಾ ನಗರಿ ಪೊಲೀಸರು ಜಿಲ್ಲೆಯ ಜನರಿಗೆ ಬಿಸಿಮುಟ್ಟಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲ ರಸ್ತೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಉಗಿಯುವವರಿಗೆ 100-1000 ರೂ. ವರೆಗೆ ದಂಡ ವಿಧಿಸುತ್ತಿದ್ದಾರೆ. ಇದಲ್ಲದೇ ಮಾಸ್ಕ್ ಹಾಕದೆ ನಗರದಲ್ಲಿ ವಿನಾಕಾರಣ ಓಡಾಡುವ ಜನರಿಗೂ ದಂಡ ಹಾಕಿದ್ದಾರೆ.
ವಿವಿಧ ತಾಲೂಕು ಮತ್ತು ಪಟ್ಟಣಗಳಲ್ಲಿ ಆದೇಶ ಉಲ್ಲಂಘನೆ ಮಾಡಿದವರಿಗೆ ಪೊಲೀಸರು ದಂಡ ವಿಧಿಸಿದ್ದು, ಮಾಸ್ಕ್ ಹಾಕದೆ ಓಡಾಡುತ್ತಿದ್ದ 339 ಜನರಿಂದ 34,200 ರೂ.ಗಳನ್ನು ಹಾಗೂ ಎಲ್ಲೆಂದರಲ್ಲಿ ಉಗುಳಿದ 87 ಜನರಿಂದ ತಲಾ ಒಬ್ಬರಿಗೆ 100 ರೂ. ಅಂತೆ 8,700 ರೂ.ಗಳ ದಂಡವನ್ನು ವಸೂಲಿ ಮಾಡಲಾಗಿದೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡದಂತೆ ಜಿಲ್ಲಾಡಳಿತ ಹೊರಡಿಸಿದ ಆದೇಶವನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮನವಿ ಮಾಡಿದ್ದಾರೆ. ಒಂದು ವೇಳೆ ನಿಯಮ ಉಲ್ಲಂಘನೆ ಮಾಡುವ ಜನರಿಗೆ ದಂಡ ಹಾಕುವುದು ಗ್ಯಾರಂಟಿ ಎಂದು ಎಚ್ಚರಿಕೆ ನೀಡಿದ್ದಾರೆ.