ಬೆಳಗಾವಿ:ನಗರದಲ್ಲಿ ಶ್ರೀರಾಮ ಸೇನೆ ಮತ್ತು ಹಿಂದೂ ರಾಷ್ಟ್ರ ಸೇನಾ ಸಂಯುಕ್ತಾಶ್ರಯದಲ್ಲಿ ನಡೆದ ವಿರಾಟ್ ಹಿಂದೂ ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ವಾಕ್ಸಮರ ನಡೆಯಿತು. ಧರ್ಮವೀರ ಸಂಭಾಜಿ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಹಿಂದೂ ರಾಷ್ಟ್ರಸೇನಾ ಸಂಸ್ಥಾಪಕ ಧನಂಜಭಾಯ್ ದೇಸಾಯಿ, ಇತ್ತೀಚೆಗೆ ಗುಂಡೇಟಿನಿಂದ ಗಾಯಗೊಂಡಿದ್ದ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತಕರ್ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಹಿಂದೂಪರ ಕಾರ್ಯಕರ್ತರು ಭಾಗಿಯಾಗಿದ್ದರು.
ಹಿಂದೂ ಸಮಾವೇಶದಲ್ಲಿ ಪ್ರಮೋದ್ ಮುತಾಲಿಕ್ ಅವರು ಕಾಂಗ್ರೆಸ್ ವಿರುದ್ಧ ತೀವ್ರ ಟೀಕಾ ಪ್ರಹಾರ ಮಾಡುತ್ತಾ, 'ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಆಯ್ತು. ಸ್ವಾತಂತ್ರ್ಯಕ್ಕೂ ಮುನ್ನ ಸ್ವಾತಂತ್ರ್ಯ ಕೊಡಿ ಅಂತಾ ಒಂದೇ ಘೋಷಣೆ ಇತ್ತು. 75 ವರ್ಷಗಳ ಬಳಿಕ ನಾವು 'ದೇಶ ಬಚಾವೋ, ಧರ್ಮ ಬಚಾವೋ, ಹಿಂದೂ ಸಮಾಜ ಬಚಾವೋ' ಎಂಬ ಘೋಷಣೆ ಕೂಗಬೇಕಾಗಿದೆ. ಯಾರಿಂದ, ಏತಕ್ಕಾಗಿ ದೇಶ ಉಳಿಸಬೇಕಾಗಿದೆ. ಮೂರು ದುಷ್ಟ ಶಕ್ತಿಗಳು ಈ ದೇಶದಲ್ಲಿ ಕೆಲಸ ಮಾಡ್ತೀವೆ. ನಮ್ಮ ಶ್ರೇಷ್ಠ ಸಂಸ್ಕೃತಿ, ಧರ್ಮ, ಸಂಪ್ರದಾಯ ನಷ್ಟ ಮಾಡಲು ದುಷ್ಟ ಶಕ್ತಿಗಳು ಯತ್ನಿಸುತ್ತಿವೆ ಎಂದರು.
ದೇಶದ್ರೋಹಿ, ಮತಾಂತರ, ಲವ್ ಜಿಹಾದ್ನಂತಹ ಕೆಲಸ ಮಾಡಿದ್ರೆ ನಾವು ಬಿಡಲ್ಲ. 2014ರವರೆಗೆ ಆಟ ಆಡಿದ್ದೀರಾ. ಈ ದೇಶದ ಸಂಪತ್ತನ್ನು ಪೋರ್ಚುಗೀಸರು, ಬ್ರಿಟಿಷರು, ಮೊಘಲರು ತಗೆದುಕೊಂಡು ಹೋಗಿದ್ದರು. ನಂತರ ಇಟಲಿಯವರು ಭಾರತವನ್ನು ದೋಚಿದರು. ಯಾವಾಗೆಲ್ಲ ಅನ್ಯಾಯವಾಗುತ್ತದೆಯೋ, ಆಗೆಲ್ಲ ಕೃಷ್ಣ ಹುಟ್ಟಿ ಬರ್ತೀನಿ ಅಂದಿದ್ದ. ಅದರ ಭಾಗವೇ ನರೇಂದ್ರ ಮೋದಿ. ‘ನಾ ಖಾವೂಂಗಾ, ನಾ ಖಾನೇ ದೂಂಗಾ’ ಅಂತಾ 9 ವರ್ಷದಲ್ಲಿ ಒಂದೇ ಒಂದು ಅಪವಾದ ಇಲ್ಲದಂತೆ ಸರ್ಕಾರ ಮುಂದೇ ಸಾಗುತ್ತಿದೆ. 2014ರ ನಂತರ ಎಂತಹ ವಿಚಾರಧಾರೆ ಪರಿವರ್ತನೆ ಬದಲಾವಣೆ ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.